ಗಂಗಾವತಿ: ಹಗಲುವೇಷ ಕಲಾವಿದ ಕಲ್ಯಾಣಂ ನಾಗರಾಜ ಅವರಿಗೆ ಗಂಗಾವತಿ ವಕೀಲರ ಸಂಘದಿಂದ ಸೆಪ್ಟೆಂಬರ್-೨೫ ರಂದು ನ್ಯಾಯಾಲಯದ ಆವರಣದಲ್ಲಿ ಅಬಿನಂದನಾ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು ಎಂದು ವಕೀಲರ ಸಂಘದ ಅಧ್ಯಕ್ಷರಾದ ಶರಣಬಸಪ್ಪ ನರಸಪ್ಪ ನಾಯಕ ಪ್ರಕಟಣೆಯಲ್ಲಿ ತಿಳಿಸಿದರು.ಕಲ್ಯಾಣಂ ನಾಗರಾಜ ಅವರು ಜಾನಪದ ಸಂಗೀತ, ಕಲೆ ಹಾಗೂ ಜಾನಪದ ಸಾಹಿತ್ಯದ ಸೇವೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು, ಅತ್ಯಮೂಲ್ಯ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಅವರ ಸೇವೆ ಕರ್ನಾಟಕ ಮತ್ತು ಕನ್ನಡ ನಾಡಿನ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಅಚ್ಚಾಗಿದೆ. ಅವರ ಸೇವೆಯು ಗತವೈಭವದ ಕನ್ನಡ ನಾಡು ನುಡಿಗಳ ಹೆಮ್ಮೆಯ ಕನ್ನಡ ಮಣ್ಣಿನ ಜನತೆಗೆ ಮಾದರಿಯಾಗಿದೆ. ಕಳೆದ ಜುಲೈ ತಿಂಗಳಲ್ಲಿ ಇವರಿಗೆ ಕರ್ನಾಟಕ ಮೀಡಿಯಾ ಕ್ಲಬ್ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಕರ್ನಾಟಕ ಭೂಷಣ ಪ್ರಶಸ್ತಿ ಪ್ರಧಾನ ಮಾಡಿ ಬಿರುದು ನೀಡಿ ಸನ್ಮಾನಿಸಿದೆ. ಪ್ರಯುಕ್ತ ಗಂಗಾವತಿ ವಕೀಲರ ಸಂಘ ಕಲ್ಯಾಣಂ ನಾಗರಾಜ ಅವರ ಸೇವೆಗೆ ಪ್ರೋತ್ಸಾಹಿಸಿ, ಪ್ರಶಂಶಿಸಿ ಈ ಅಭಿನಂದನಾ ಪ್ರಶಸ್ತಿ ಪತ್ರ ನೀಡಲಾಗಿದೆ. ಕಲ್ಯಾಣಂ ನಾಗರಾಜ ಅವರ ಕಲೆ ಹಾಗೂ ಸೇವೆಯನ್ನು ಸರ್ಕಾರ ಗುರುತಿಸಿ ಉನ್ನತ ಪ್ರಶಸ್ತಿ ಹಾಗೂ ಗೌರವ ಸನ್ಮಾನಗಳನ್ನು ನೀಡುವ ಮೂಲಕ ಅವರನ್ನು ಪ್ರೋತ್ಸಾಹಿಸಬೇಕಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಶರದಕುಮಾರ ದಂಡಿನ್, ಕೆಂಚಪ್ಪ ವಕೀಲರು ಸೇರಿದಂತೆ ವಕೀಲರ ಸಂಘದ ಪದಾಧಿಕಾರಿಗಳು, ಮಹಿಳಾ ವಕೀಲರಾದ ಸೈಯ್ಯದಾಬಾನು ಸೇರಿದಂತೆ ಇತರರು ಉಪಸ್ಥಿತರಿದ್ದರು.