ಗಂಗಾವತಿ: ಸೆಪ್ಟೆಂಬರ್-೨೪ ಮಧ್ಯಾಹ್ನ ೨:೩೦ ಗಂಟೆಗೆ ಬೆಂಗಳೂರಲ್ಲಿ ದೈವಾಧೀನರಾದ ಕರುನಾಡಿನ ಹಿರಿಯ ಖ್ಯಾತ ಸಾಹಿತಿ, ಕಾದಂಬರಿಕಾರ, ಪದ್ಮಭೂಷಣ ಶ್ರೀಯುತ ಎಸ್.ಎಲ್ ಭೈರಪ್ಪನವರಿಗೆ ಇಂದು ಸೆಪ್ಟೆಂಬರ್-೨೫ ರಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ವತಿಯಿಂದ ಶ್ರದ್ದಾಂಜಲಿ ಹಾಗೂ ನುಡಿ ನಮನವನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಅಶೋಕ್ ಕುಮಾರ್ ರಾಯ್ಕರ್ ಮಾತನಾಡುತ್ತಾ ಒಬ್ಬ ಯುಗ ಪ್ರವರ್ತಕರಂತೆ ಹೊಸ ವೈಚಾರಿಕ ಜಗತ್ತಿನ ಸೃಷ್ಟಿಸಿ ಯುವ ಸಾಹಿತಿಗಳಿಗೆ ಭೈರಪ್ಪನವರು ಪ್ರೇರಣೆಯೆಂದು ಕೊಂಡಾಡಿದರು. ಯುವ ಸಾಹಿತಿಗಳು ಅವರ ಕಾದಂಬರಿ ವಿಮರ್ಶೆ ಹಾಗೂ ಜೀವನಕ್ರಮದಿಂದ ಪ್ರೇರಣೆ ಪಡೆದು ಹೊಸ ಸೃಷ್ಟಿಯ ವೈಚಾರಿಕ ವಲಯವನ್ನು ನಿರ್ಮಿಸಲಿ ಎಂದು ಕರೆ ನೀಡಿದರು.
ಕಾದಂಬರಿಗಳಲ್ಲದೆ ಸಾಹಿತ್ಯ ಮತ್ತು ಪ್ರತೀಕ, ನಾನೇಕೆ ಬರೆಯುತ್ತೇನೆ ಎಂಬ ಕೃತಿಗಳನ್ನು ಭೈರಪ್ಪ ರಚಿಸಿದ್ದಾರೆ ಎಂದು ಕೊಪ್ಪಳ ಜಿಲ್ಲಾ ಕಾರ್ಯದರ್ಶಿ ಶರಣಪ್ಪ ತಳ್ಳಿ ಅಭಿಪ್ರಾಯಪಟ್ಟರು. ಹಿರಿಯ ಉಪನ್ಯಾಸಕರಾದ ಶ್ರೀಯುತ ನಾರಾಯಣ ಕಂದಗಲ್ ಭೈರಪ್ಪನವರು ಓದುಗರ ಹಾಗೂ ವಿಮರ್ಶಕರ ಮನವನ್ನು ಗೆದ್ದವರೆಂದು ಹೇಳಿದರು.
ಬೈರಪ್ಪ ಅವರ ಸಾಧನೆ ನಡೆ-ನುಡಿ ಓದು ಬರಹ ಅನುಕರಣಿಯವೆಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಬಳ್ಳಾರಿ ವಿಭಾಗದ ಸಂಯೋಜಕರಾದ ಟಿ. ಶ್ರೀಧರ್ ಹೇಳಿದರು.
ಬಡತನದಿಂದ ಬೆಳೆದು ಬಂದು ಜೀವನ ಅನುಭವದಿಂದ ಬರವಣಿಗೆಗೆ ಮೊದಲು ಅವರು ಆಳವಾಗಿ ಅಧ್ಯಯನ ಕೈಗೊಂಡು ಇದಕ್ಕೆ ಅವರ ಕಾದಂಬರಿಗಳು ಉತ್ಕೃಷ್ಟತೆಗೆ ಕಾರಣವೆಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಗಂಗಾವತಿ ನಗರದ ಉಪಾಧ್ಯಕ್ಷರಾದ ಹಾಗೂ ನಿವೃತ್ತ ಶಿಕ್ಷಕರಾದ ಶ್ರೀ ಪ್ರಕಾಶ್ ಪಾಟೀಲ್ ಅಭಿಪ್ರಾಯಪಟ್ಟರು.
ದೇಶದ ಅತ್ಯಂತ ಉನ್ನತವಾದ ಗೌರವದ ಪದ್ಮಭೂಷಣರ ಗೌರವಕ್ಕೆ ಪಾತ್ರರಾದವರು ಎಂದು ಇತರ ಪ್ರಶಸ್ತಿಗಳ ಗೋಜಿಗೆ ಹೋಗಲಿಲ್ಲ. ಸಾಹಿತ್ಯವನ್ನು ಅವರಂತೆ ಸಮಗ್ರವಾಗಿ ವಿಮರ್ಶೆ ಮಾಡಿದ ಕನ್ನಡ ನಾಡಿನಲ್ಲಿ ಅತಿ ವಿರಳವೆಂದು ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ಗಂಗಾವತಿ ನಗರದ ಅಧ್ಯಕ್ಷರಾದ ಜಡಿಯಪ್ಪ ಮೆಟ್ರಿ ಹಿರಿಯ ಸಾಹಿತಿ ಭೈರಪ್ಪನವರನ್ನು ಸ್ಮರಿಸಿದರು.
ಗಂಗವತಿ ನಗರ ಉಪಾಧ್ಯಕ್ಷರಾದ ಮಹಾದೇವ್ ಮೋತಿ ಇವರಿಂದ ಶಾಂತಿ ಮಂತ್ರ ಹಾಗೂ ಗಂಗಾವತಿ ನಗರ ಕಾರ್ಯದರ್ಶಿಗಳಾದ ಯಲ್ಲಪ್ಪ ಕಲಾಲ್ ಇವರಿಂದ ವಂದನಾರ್ಪಣೆ ನಡೆಯಿತು.