ಗಂಗಾವತಿ: ಅರವತ್ತು ವರ್ಷದ ಬದುಕಿನಲ್ಲಿ ನಲವತ್ತೆರಡು ವರ್ಷಗಳನ್ನು ಕೆನರಾ ಬ್ಯಾಂಕ್ ಸೇವೆಯಲ್ಲಿಯೇ ಕಳೆದುದು ವಿಶೇಷವಲ್ಲ. ಇಡೀ ತನ್ನ ಸೇವಾ ಅವಧಿಯಲ್ಲಿ ಸಹೋದ್ಯೋಗಿ ಹಾಗೂ ಗ್ರಾಹಕರಿಗೆ ಮನ ನೋಯುವಂತಹ ಒಂದೇ ಒಂದು ಮಾತನ್ನಾಡದ ಭೀಮಣ್ಣನವರದು ವಿಸ್ಮಯ ವ್ಯಕ್ತಿತ್ವವೆಂದು ಅಖಿಲ ಭಾರತ ಕೆನರಾ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯರಿ ಅವರು ಅಭಿಪ್ರಾಯಪಟ್ಟರು.
ಅವರು ಇಲ್ಲಿನ ಕೆನರಾಬ್ಯಾಂಕ್‌ನಲ್ಲಿ ಸೇವಾ ನಿವೃತ್ತಿಹೊಂದಿದ ಭೀಮಣ್ಣನವರ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಭೀಮಣ್ಣನವರು ನನಗೆ ಸಹೋದ್ಯೋಗಿಯ ಜೊತೆಗೆ ನನಗೆ ಅಣ್ಣನ ಸ್ಥಾನದಲ್ಲಿದ್ದರು ಎಂದು ೩೩ ವರ್ಷಗಳ ಹಿಂದಿನ ಬಾಂಧವ್ಯವನ್ನು ನೆನಪು ಮಾಡಿಕೊಂಡರು. ನಿವೃತ್ತಿಯ ನಂತರವೂ ಗಂಗಾವತಿ ಶಾಖೆಯಲ್ಲಿ ನೆನಪು ಮಾಡಿಕೊಳ್ಳುವ ವ್ಯಕ್ತಿತ್ವ ಭೀಮಣ್ಣನವರದು ಎಂದು ತಮ್ಮ ಹಲವಾರು ಪ್ರಸಂಗಗಳನ್ನು ಹಂಚಿಕೊಂಡರು.
ನಿವೃತ್ತ ನೌಕರರಾದ ರಾಘವೇಂದ್ರರಾವ್ ಅಳವಂಡಿಕರ್, ಕೆ. ಬಸವರಾಜ, ಮಹಾದೇವಪ್ಪ ಐಲಿ, ವೈ.ಎಸ್ ಕಲ್ಲೂರು, ಹೆಚ್. ರೇಣುಕಪ್ಪ ತಮ್ಮ ತಮ್ಮ ಅನುಭವಗಳನ್ನು ವ್ಯಕ್ತಪಡಿಸಿದರು.
ಭೌತಿಕವಾಗಿ ಭೀಮಣ್ಣನವರನ್ನು ಮುಟ್ಟಬಹುದೇ ಹೊರತು ಅವರ ವ್ಯಕ್ತಿತ್ವವನ್ನು ನಾವು ಮುಟ್ಟಲಾರೆವು ಎಂದು ಜುಲೈನಗರ ಶಾಖೆಯ ಬಿ.ಕೆ ವಾಸುದೇವರಾವ್ ಹೇಳಿದರೆ, ಕಾರಟಗಿ ಶಾಖೆಯ ಚಿದಂಬರ ಮುಜುಂದಾರ ಅವರು ಭೀಮಣ್ಣನವರ ಸೇವಾ ಅವಧಿಯ ಕೆಲ ಪ್ರಸಂಗಗಳನ್ನು ನೆನಪಿಸಿಕೊಂಡರು.
ಇದೇ ಸಂದರ್ಭದಲ್ಲಿ ಭೀಮಣ್ಣನವರ ಕುಟುಂಬವರ್ಗವು ಪಾಲ್ಗೊಂಡಿದ್ದು, ಮಕ್ಕಳಾದ ಪ್ರೇಮಲಕ್ಷ್ಮಿ, ಪ್ರಮೋದ ಹಾಗೂ ಪ್ರವೀಣ್ ರವರು ಮಾತನಾಡಿ, ಭೀಮಣ್ಣನವರ ಮಕ್ಕಳೆಂದು ಹೇಳಿಕೊಳ್ಳಲು ನಮಗೆ ಹೆಮ್ಮೆಯಾಗುತ್ತದೆ ಎಂದರು. ಭೀಮಣ್ಣನವರ ಶ್ರೀಮತಿಯಾದ ರೇಣುಕಾ ಅವರು ಆನಂದಬಾಷ್ಪಗಳೊಂದಿಗೆ ಮೌನವಾಗಿಯೇ ಕಾರ್ಯಕ್ರಮವನ್ನು ಆಸ್ವಾದಿಸಿದರು.
ನೌಕರರಾದ ಶಿವಕುಮಾರ, ಬಸವರಾಜ, ಸುದರ್ಶನ, ರಾಜಶೇಖರ್ ಭೀಮಣ್ಣನವರ ತಮ್ಮ ಸಂಬಂಧವನ್ನು ಮೆಲುಕು ಹಾಕಿದರು.
ಶಾಖಾ ವ್ಯವಸ್ಥಾಪಕರಾದ ಸುಧೀಂದ್ರ ಜೋಶಿಯವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಬ್ಯಾಂಕ್‌ನ ಠೇವಣಿ ಹಾಗೂ ವಸೂಲಾತಿಯಲ್ಲಿ ಭೀಮಣ್ಣನವರ ಸೇವೆ ಮರೆಯಲಾರದಂತಹುದು ಎಂದು ತಿಳಿಸಿದರು.
ಅನಿವಾರ್ಯ ಕಾರಣಗಳಿಂದ ಮುಖ್ಯ ವ್ಯವಸ್ಥಾಪಕ ಆರ್. ಗಿರಿಧರನ್ ಅವರ ಅನುಪಸ್ಥಿತಿಯನ್ನು ಜ್ಞಾಪಿಸಿಕೊಂಡ ನೌಕರರು, ಅವರು ಸಮಾರಂಭದಲ್ಲಿದ್ದಿದ್ದರೆ ಇನ್ನೂ ಹೆಚ್ಚಿನ ಮೆರುಗು ಬರುತ್ತಿದ್ದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಭೀಮಣ್ಣನವರು, ನಾನು ಬೇರೆ, ಬ್ಯಾಂಕ್ ಬೇರೆ ಎಂದು ತಿಳಿದುಕೊಳ್ಳದಿರುವುದೇ ಇಂದಿನ ತಮ್ಮ ಪ್ರೀತಿ, ವಿಶ್ವಾಸಕ್ಕೆ ಕಾರಣ ಎಂದು ತಾವು ಕಷ್ಟಪಟ್ಟ ಹಿಂದಿನ ಘಟನೆಗಳನ್ನು ಜ್ಞಾಪಿಸಿಕೊಂಡು ಕೆನರಾ ಬ್ಯಾಂಕ್ ನೌಕರಿಗೆ ಬರಲು ತಮ್ಮ ಧಣಿ ಬೃಂದಾವನ ಹೋಟಲ್‌ನ ದಿ|| ಸತ್ಯನಾರಾಯಣರವರೇ ಕಾರಣ ಎಂದು ಹೃದಯತುಂಬಿ ಹೇಳಿದರು.
ಶಾಖೆಯ ಕ್ಯಾಷಿಯರ್ ಹನುಮಂತಪ್ಪ ಇವರು ಅಚ್ಚುಕಟ್ಟಾಗಿ ಸಭಾ ನಿರ್ವಹಣೆಗೈದರು.