ಗಂಗಾವತಿ: ತಾಲೂಕಿನ ಚಿಕ್ಕಬೆಣಕಲ್ ಗ್ರಾಮದ ೧೩೩ನೇ ಶ್ರೀಗುರು ಬೆಟ್ಟದೇಶ್ವರ ಶ್ರೀಗುರು ಲಿಂಗೇಶ್ವರರ ಜಾತ್ರಾ ಮಹೋತ್ಸವದ ಜೋಡು ರಥೋತ್ಸವವು ಮಾರ್ಚ್-೨೨ ಶನಿವಾರ ಅದ್ಧೂರಿಯಗಿ ಜರುಗಿತು.
ಹಿಂದಿನ ದಿನ ಮಾರ್ಚ್-೨೧ ಶುಕ್ರವಾರ ೧೩೩ನೇ ಪುಣ್ಯತಿಥಿಯ ಅಂಗವಾಗಿ ಪಲ್ಲಕ್ಕಿ ಉತ್ಸವ ಜರುಗಿದ್ದು, ಮಾರ್ಚ್-೨೨ ಫಾಲ್ಗುಣ ಬಹುಳ ಅಷ್ಠಮಿ ಶನಿವಾರ ಬೆಳಗಿನ ಜಾವ ೫:೩೦ಕ್ಕೆ ಬ್ರಾಹ್ಮಿ ಮುಹೂರ್ತದಲ್ಲಿ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ತದನಂತರ ಮಹಾಮಂಗಳಾರತಿ, ೧೧:೧೫ ರಿಂದ ೧೨:೧೫ ರವರೆಗಿನ ಅಭಿಜಿನ್ ಲಗ್ನದ ಶುಭಮುಹೂರ್ತದಲ್ಲಿ ಸಾಮೂಹಿಕ ವಿವಾಹಗಳು ಜರುಗಿದವು. ಮದ್ಯಾಹ್ನ ಮಹಾಪ್ರಸಾದ ಕಾರ್ಯಕ್ರಮ ಜರುಗಿತು. ಸಂಜೆ ೫:೦೦ ಗಂಟೆಗೆ ಶ್ರೀ ಬೆಟ್ಟದೇಶ್ವರ ಹಾಗೂ ಶ್ರೀ ಲಿಂಗೇಶ್ವರರ ಜೋಡು ರಥೋತ್ಸವ ನಡೆಯಿತು.
ಈ ಉತ್ಸವದ ಸಾನಿಧ್ಯವನ್ನು ಹೆಬ್ಬಾಳ ಮಠದ ಶ್ರೀ ನಾಗಭೂಷಣ ಶಿವಾಚಾರ್ಯರು, ಕಂಪ್ಲಿ ಕಲ್ಮಠದ ಶ್ರೀ ಮ.ನಿ.ಪ್ರ ಅಭಿನವ ಪ್ರಭು ಮಹಾಸ್ವಾಮಿಗಳು, ಶಾ.ಗ ಹೂವಿನಹಡಗಲಿ ಶ್ರೀ ಮ.ನಿ.ಪ್ರ. ಹಿರೇಶಾಂತವೀರ ಮಹಾಸ್ವಾಮಿಗಳು, ಬೆಳ್ಳಟ್ಟಿ ರಾಮಲಿಂಗೇಶ್ವರ ದಾಸೋಹ ಮಠದ ಶ್ರೀ ಷ.ಬ್ರ. ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಹಾವನೂರಿನ ಶ್ರೀ ಶಿವಕುಮಾರ ಮಹಾಸ್ವಾಮಿಗಳು, ಸುಳೇಕಲ್ ಬೃಹನ್ಮಠದ ಶ್ರೀಶೀಶ್ರೀ ಭುವನೇಶ್ವರಯ್ಯ ತಾತನವರು, ಉಡುಮಕಲ್ ಹಿರೇಮಠದ ಶ್ರೀ ವೀರಬಸಯ್ಯ ಮಹಾಸ್ವಾಮಿಗಳು ವಹಿಸಿದ್ದರು.
ಈ ಜಾತ್ರಾ ಮಹೋತ್ಸವದಲ್ಲಿ ಮಾಜಿ ಶಾಸಕ ಪರಣ್ಣ್ಣ ಮುನವಳ್ಳಿ ಸೇರಿದಂತೆ ಅನೇಕ ಮುಖಂಡರು ಹಾಗೂ ಚಿಕ್ಕಬೆಣಕಲ್ ಹಾಗೂ ಸುತ್ತಮುತ್ತಲಿನ ಸಾವಿರಾರು ಗ್ರಾಮಸ್ಥರು ಭಾಗವಹಿಸಿದ್ದರು.
ಮಾರ್ಚ್-೨೩ ಭಾನುವಾರ ಸಂಜೆ ಕಡುಬಿನ ಕಾಳಗ ನಡೆಯಲಿದೆ.