ಗಂಗಾವತಿ: ಗಂಗಾವತಿಯ ಸರ್ವ ಜನಾಂಗದ ದೈವೀ ಪುರುಷರಾದ ಪರಮಪೂಜ್ಯ ಶ್ರೀ ನವಣಕ್ಕಿ ನಾಗಪ್ಪ ತಾತನವರು ತಮ್ಮ ಮಂತ್ರಶಕ್ತಿಯಿಂದ ದಾರ ನೀಡಿ, ಬದುಕಿನ ದಾರಿ ತೋರಿಸುತ್ತಿದ್ದರು, ಜೊತೆಗೆ ಕಷ್ಟ, ಸಂಕೋಲೆಗಳನ್ನು ಹೊತ್ತುತಂದ ಭಕ್ತಾದಿಗಳಿಗೆ ಮಂತ್ರಿಸಿದ ನೀರು ನೀಡುವ ಮೂಲಕ ಅವರ ಕಷ್ಟಗಳನ್ನು ಕಳೆಯುತ್ತಿದ್ದರು ಎಂದು ಹೆಬ್ಬಾಳ ಬೃಹನ್ಮಠದ ಪೂಜ್ಯ ಶ್ರೀ ನಾಗಭೂಷಣ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು.
ಅವರು ಏಪ್ರಿಲ್-೮ ಮಂಗಳವಾರ ಶ್ರೀ ನವಣಕ್ಕಿ ನಾಗಪ್ಪ ತಾತನವರ ಶಿಲಾ ಮೂರ್ತಿ ಪ್ರತಿಷ್ಠಾಪನೆಯನ್ನು ನೆರವೇರಿಸಿ ಮಾತನಾಡಿದರು. ನವಣಕ್ಕಿ ನಾಗಪ್ಪನವರ ೨೧ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರ ಶಿಲಾಮೂರ್ತಿ ಪ್ರತಿಷ್ಠಾಪನೆಗೈದಿರುವುದು ಸ್ತುತ್ಯಾರ್ಹವಾಗಿದ್ದು, ಕುರುಹಿನಶೆಟ್ಟಿ ಸಮಾಜದ ಶ್ರೀ ನವಣಕ್ಕಿ ನಾಗಪ್ಪ ತಾತನವರು ಒಬ್ಬ ದೈವೀ ಪುರುಷರಾಗಿ ಅಪಾರ ಸಂಖ್ಯೆಯ ಭಕ್ತ ಸಮೂಹವನ್ನು ಹೊಂದಿದ್ದರು. ಅವರು ಹಾವು ಕಡಿದರೆ, ಚೇಳು ಕಡಿದರೆ, ನಾಯಿ ಕಡಿದರೆ ಮಂತ್ರದ ಮೂಲಕ ದಾರಿ ಕಟ್ಟಿ ಗುಣಪಡಿಸುತ್ತಿದ್ದರು, ಅಷ್ಟಲ್ಲದೇ ಚರ್ಮರೋಗ, ವಿವಿಧ ಕಾಯಿಲೆಗಳನ್ನು ಮನೆ ಮದ್ದುಗಳ ಮೂಲಕ ಗುಣಪಡಿಸಿ, ಜನರ ಪ್ರೀತಿಗೆ ಪಾತ್ರರಾಗಿದ್ದರು. ಅವರು ದೈವಾಧೀನವಾದರೂ ಭಕ್ತಾದಿಗಳು ಅವರ ಗದ್ದುಗೆಗೆ ಭೇಟಿ ನೀಡಿ ಪೂಜೆ ಸಲ್ಲಿಸುವ ಮೂಲಕ ತಮ್ಮ ಕಷ್ಟಗಳನ್ನು ನಿವಾರಿಸಿಕೊಳ್ಳುತ್ತಿದ್ದಾರೆ. ಇಂತಹ ಒಬ್ಬ ದೈವೀ ಪುರುಷನನ್ನು ಹೊಂದಿದ್ದ ಗಂಗಾವತಿಯು ಪುಣ್ಯಭೂಮಿಯಾಗಿದೆ ಎಂದು ಹೇಳಿದರು.
ನಂತರ ತಾತನವರ ಆತ್ಮೀಯ ಭಕ್ತರಾದ ಮಂಜುನಾಥ ಕುರುಗೋಡು ಮಾತನಾಡಿ, ತಾತನವರ ಶಿಲಾ ಮೂರ್ತಿಯನ್ನು, ಪರಮ ಭಕ್ತರಾದ ಶ್ರೀಧರಗೌಡ ದಂಪತಿಗಳು ಕೊಡುಗೆ ಮಾಡಿದ್ದು ಹಾಗೂ ಹೆಬ್ಬಾಳ ಶ್ರೀಗಳ ಅಮೃತ ಹಸ್ತದಿಂದ ಶ್ರೀ ನವಣಕ್ಕಿ ನಾಗಪ್ಪನವರ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ನೆರೆವೇರಿಸಿರುವುದು ಅಪಾರ ಭಕ್ತ ಸಮೂಹಕ್ಕೆ ಹರ್ಷ ತಂದಿದೆ ಎಂದರು.
ನಂತರ ಪೂಜ್ಯ ಶ್ರೀ ನವಣಕ್ಕಿ ತಾತನವರ ಶಿಲಾಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು. ನೆರೆದ ಭಕ್ತಸಮೂಹಕ್ಕೆ ಅನ್ನಸಂತರ್ಪನೆ ವ್ಯವಸ್ಥೆ ಮಾಡಲಾಗಿತ್ತು.
ಈ ಶಿಲಾಮೂರ್ತಿ ಪ್ರತಿಷ್ಠಾಪನೆಯಲ್ಲಿ ಯುವ ಮುಖಂಡರಾದ ಸರ್ವೇಶ್ ಮಾಂತಗೊಂಡ, ನವಣಕ್ಕಿ ಕುಟುಂಬಸ್ಥರು ಸೇರಿದಂತೆ ತಾತನವರ ಭಕ್ತರಾದ ಲಕ್ಷ್ಮಣಪ್ಪ ಶಿರವಾರ, ಶ್ಯಾವಿ ತಿಪ್ಪಣ್ಣ, ಸುನೀತಾ ದಂಪತಿಗಳು, ವೈ.ಕುಬೇರಪ್ಪ, ಕೆ.ಬಸವರಾಜ, ಎಸ್.ಬಸವರಾಜ ಉಪ್ಪಾರ ಕೃಷ್ಣ, ತಾಂದಳೆ ಕುಟುಂಬ ಸದಸ್ಯರು ಹಾಗೂ ನೂರಾರು ಭಕ್ತರು ಪಾಲ್ಗೊಂಡು ತಾತನ ಕೃಪೆಗೆ ಪಾತ್ರರಾಗಿ ಆಶೀರ್ವಾದ ಪಡೆದು, ಪ್ರಸಾದ ಸ್ವೀಕರಿಸಿದರು.