ಗಂಗಾವತಿ: “ಸಪ್ತಪದಿ ತುಳಿದ ಗೃಹಿಣಿ, ನವ ವರ್ಷಗಳ ನಂತರ ಮತ್ತೆ ವಿದ್ಯಾರ್ಥಿನಿ” ಎಂಬ ಈ ವಾಕ್ಯ ನಿಮಗೆ ಕಾದಂಬರಿಯ ಶೀರ್ಷಿಕೆ ಎನಿಸಬಹುದು, ಆದರೆ ಇದು ಸತ್ಯ. ವಿದ್ಯೆ ಎಂಬುವುದು ಯಾವುದೇ ಕಲ್ಮಶವಿಲ್ಲದ ಅಪರಿಪೂರ್ಣ ಸಾಗರ. ಇಂತಹ ಸಾಗರದಲ್ಲಿ ಈಜುವವರೆಷ್ಟೋ, ಮುಳುಗುವವರೆಷ್ಟೋ ಆದರೆ ಮುಳುಗಿ ತೇಲುವವರು ಅತಿ ಕಡಿಮೆ. ಓದಿಗೆ ವಯಸ್ಸಿನ ಮಿತಿ ಇಲ್ಲವೆಂಬ ಸತ್ಯವನ್ನು ಒಬ್ಬ ಎರಡು ಮಕ್ಕಳ ತಾಯಿ ೨೦೨೪-೨೫ರ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಯಲ್ಲಿ ಪರೀಕ್ಷೆಯನ್ನು ಉತ್ತಮ ಅಂಕಗಳೊAದಿಗೆ ತೇರ್ಗಡೆಗೊಂಡು ವಿಶಿಷ್ಟತೆಗೆ ಕಾರಣರಾಗಿದ್ದಾರೆ.
ಗಂಗಾವತಿ ತಾಲೂಕಿನ ಹಿರೇಬೆಣಕಲ್ ಗ್ರಾಮದ ಲಕ್ಷ್ಮಿಯೇ ಆ ಮಹಿಳೆ. ಇವರು ಹಿರೇಬೆಣಕಲ್ ಶಾಲೆಯಲ್ಲಿ ತಮ್ಮ ಎಂಟನೇ ತರಗತಿಯನ್ನು ಎರಡನೇ ರ‍್ಯಾಂಕ್ ಪಡೆದು ತೇರ್ಗಡೆಯಾಗಿದ್ದರು. ನಂತರ ತಮ್ಮ ೧೮ನೇ ವಯಸ್ಸಿನಲ್ಲಿ ಮದುವೆಯಾಗಿದ್ದು, ಇದರ ಮಧ್ಯದಲ್ಲಿ ಅವರ ಓದು ನಿಂತು ಹೋಗುತ್ತದೆ. ತದನಂತರ ಒಂಭತ್ತು ವರ್ಷಗಳ ನಂತರ ಎರಡು ಮಕ್ಕಳ ಗೃಹಿಣಿಯಾಗಿದ್ದ ಲಕ್ಷ್ಮಿಯವರಿಗೆ ಓದುವ ಆಸೆ ಚಿಗುರೋಡೆದು ಪತಿಗೆ ತಿಳಿಸಿದರು. ಅವರ ಪತಿ ಏನನ್ನು ಯೋಚಿಸದೆ ಓದಬೇಕೆಂಬ ಚಿಗುರಿಗೆ ಆಸರೆಯಾಗಿ ನಿಂತರು.
ಪತಿಯ ಆಸರೆಯನ್ನು ಪಡೆದ ಮಹಿಳೆ ೨೦೨೪-೨೫ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ನೇರವಾಗಿ ಬರೆದು ಯಾವುದೇ ಇಂಟರ್ನಲ್ ಅಂಕಗಳಿಲ್ಲದೇ ೩೦೪ ಅಂಕಗಳನ್ನು ಪಡೆದು ತೇರ್ಗಡೆಯಾಗಿದ್ದಾರೆ. ತೆರ್ಗಡೆಯಾದ ಸಂಗತಿ ಸಾಧಾರಣವಾಗಿರಬಹುದು. ಆದರೆ ಪ್ರತಿದಿನ ಶಾಲೆಗೆ ಹೋಗಿ ಬರುವ ಎಷ್ಟೋ ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಾರೆ. ಹೀಗಿರುವಾಗ ಎರಡು ಮಕ್ಕಳ ಗೃಹಿಣಿ ೯ ವರ್ಷಗಳ ನಂತರ ಮತ್ತೆ ಓದುವ ಛಲತೊಟ್ಟು ಉತ್ತಮ ಅಂಕಗಳೊಂದಿದೆ ತೇರ್ಗಡೆಯಾಗಿರುವುದು ವಿಶಿಷ್ಟವಾಗಿದೆ. ಇದು ಓದನ್ನು ಅರ್ಧಕ್ಕೆ ನಿಲ್ಲಿಸಿ ಮತ್ತೆ ಓದಬೇಕು ಎಂಬ ಆಸೆಪಡುವವರಿಗೆ ಸ್ಪೂರ್ತಿ ಎಂದು ಊರಿನ ಶಿಕ್ಷಣ ಪ್ರೇಮಿಗಳು ಖುಷಿಯನ್ನು ವ್ಯಕ್ತಪಡಿಸಿ ಅವರನ್ನು ಗೌರವಿಸಿದ್ದಾರೆ.