ಸನಾತನ ಧರ್ಮ ರಕ್ಷಣೆಗೆ ಶೃಂಗೇರಿ ಶಾರದಾ ಪೀಠದ ಕೊಡುಗೆ ಅನನ್ಯ: ನಾರಾಯಣರಾವ್ ವೈದ್ಯ.

ಗಂಗಾವತಿ: ಅದ್ವೈತ ಸಿದ್ದಾಂತದ ತಳಹದಿಯ ಮೇಲೆ ಜಗದ್ಗುರು ಶ್ರೀ ಶಂಕರಾಚಾರ್ಯರು ದೇಶದ ನಾಲ್ಕು ದಿಕ್ಕುಗಳಲ್ಲಿ ಸ್ಥಾಪಿಸಲಾದ ಪೀಠಗಳಲ್ಲಿ ಪ್ರಥಮ ಪೀಠ ಎಂಬ ಹೆಗ್ಗಳಿಕೆಗೆ ಪಾತ್ರವಾದ ಶೃಂಗೇರಿ ಶಾರದಾ ಪೀಠ ತನ್ನದೇ ಆದ ಗುರು ಪರಂಪರೆಯನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಪೀಠವು ಸನಾತನ ಧರ್ಮದ ರಕ್ಷಣೆ ಹಾಗೂ ದೇಶದ ಸುಭಿಕ್ಷೆಗೆ ಮಹತ್ವವಾದ ಕೊಡುಗೆಯನ್ನು ನೀಡಿದೆ ಎಂದು ಶಂಕರ ಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ ಹೇಳಿದರು.

ಅವರು ಮಂಗಳವಾರ ಶಾರದಾ ದೇವಸ್ಥಾನದಲ್ಲಿ ಜಗದ್ಗುರು ಶ್ರೀಶ್ರೀ ವಿದುಶೇಖರ ಮಹಾಸ್ವಾಮಿಗಳವರ ೩೩ನೆಯ ವರ್ಧಂತಿ ಮಹೋತ್ಸವದ ಧರ್ಮಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಶೃಂಗೇರಿಯ ಹಿರಿಯ ಜಗದ್ಗುರುಗಳಾದ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳವರ ದಿವ್ಯದೃಷ್ಟಿಯ ಪರಿಣಾಮವಾಗಿ ಶ್ರೀ ವಿದುಶೇಖರ ಮಹಾಸ್ವಾಮಿಗಳವರ ತಮ್ಮ ೨೨ನೇ ವಯಸ್ಸಿನಲ್ಲಿ ಜನವರಿ-೨೩, ೨೦೧೫ ರಂದು ತಮ್ಮ ಉತ್ತರಾಧಿಕಾರಿಯಾಗಿ ಸನ್ಯಾಸತ್ವ ಅನುಗ್ರಹಿಸಿದರು. ಬಳಿಕ ಗುರುಗಳ ಅನುಗ್ರಹದಂತೆ ಉತ್ತರ ಹಾಗೂ ದಕ್ಷಿಣ ಭಾರತದಲ್ಲಿ ಧರ್ಮ ವಿಜಯಯಾತ್ರೆ, ಪ್ರಯಾಗರಾಜ್ ಕುಂಭಮೇಳದಲ್ಲಿ ಪುಣ್ಯಸ್ನಾನ, ಕಾಶ್ಮೀರದಲ್ಲಿ ಶ್ರೀ ಶಂಕರಾಚಾರ್ಯರ ಪ್ರತಿಷ್ಠಾಪನೆ ಸೇರಿದಂತೆ ದೇಶ ಯುದ್ಧದ ಸ್ಥಿತಿಯಲ್ಲಿದ್ದಾಗಲೇ ದೇಶದ ಒಳಿತಿಗಾಗಿ ಪ್ರಾರ್ಥಿಸಿದರು. ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಬಲಿಯಾದ ಎಲ್ಲಾ ಸಂತ್ರಸ್ತ ಕುಟುಂಬಗಳಿಗೆ ಶ್ರೀ ಶಾರದಾ ಪೀಠ ಪ್ರಸಾದದ ರೂಪದಲ್ಲಿ ಎರಡು ಲಕ್ಷ ರೂಪಾಯಿ ಕಳಿಸಿಕೊಟ್ಟರು. ದೇಶ ಕಾಯುವ ಯೋಧರಿಗಾಗಿ ಪ್ರತಿವರ್ಷ ಶಾರದಾ ಪೀಠದಿಂದ ಆರ್ಥಿಕ ನೆರವು ನೀಡುತ್ತಿರುವುದು ಅವರ ಅಪ್ರತಿಮ ದೇಶಭಕ್ತಿಯನ್ನು ಬಿಂಬಿಸುತ್ತದೆ. ನಗರದಲ್ಲಿ ಶ್ರೀಮಠ ಸ್ಥಾಪನೆಗೊಂಡು ಎಂಟು ವರ್ಷಗಳು ಪೂರೈಸುತ್ತಿದ್ದು, ಉಭಯ ಜಗದ್ಗುರುಗಳ ಅನುಗ್ರಹದಂತೆ ಧಾರ್ಮಿಕ ಹಾಗೂ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಾ ಬರಲಾಗಿದೆ ಎಂದು ತಿಳಿಸಿದ ಅವರು, ಸಮರ್ಥ ಪೀಠಾಧೀಶ್ವರರಾಗಿ ಮಠದ ಬಹು ಆಯಾಮದ ಧಾರ್ಮಿಕ ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಶಕ್ತಿ ತುಂಬುತ್ತಿದ್ದಾರೆ. ಸನಾತನ ಧರ್ಮದ ಸಮರ್ಥ ಮಾರ್ಗದರ್ಶಕರಾಗಿ ಸಾಧನಾ ಪಥದಲ್ಲಿ ಮುನ್ನಡೆಯುತ್ತಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾರದಾ ಶಂಕರ ಭಕ್ತ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಅಷ್ಟೋತ್ತರ ಪಾರಾಯಣ, ಶಿವ ಪಂಚಾಕ್ಷರಿ ಸ್ತೋತ್ರ ಪಾರಾಯಣ ಇತರೆ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ರಾಘವೇಂದ್ರ ಅಳವಂಡಿಕರ್, ಜಗನ್ನಾಥ್ ಅಳವಂಡಿಕರ್, ಬಾಲಕೃಷ್ಣ ದೇಸಾಯಿ, ಅನಿಲ್, ನಾಗೇಶ ಭಟ್, ಶ್ರೀನಿವಾಸ ಕರಮುಡಿ, ಭೀಮಾಶಂಕರ ಹೊಸಳ್ಳಿ, ಪವನ್ ಜೋಶಿ, ಮೋಹನ್ ಲೆಕ್ಕಿಹಾಳ, ವೇಣು, ಪ್ರಶಾಂತ್ ಜೋಷಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply