ಪತ್ರಿಕಾ ಮಾದ್ಯಮ ಪ್ರಜಾಪ್ರಭುತ್ವದ ಪ್ರಾಣವಾಯು: ಕೆ.ವಿ ಪ್ರಭಾಕರ್

ಬೆಂಗಳೂರು: ಮಾಧ್ಯಮಗಳು ಪ್ರಜಾಪ್ರಭುತ್ವದ ಪ್ರಾಣವಾಯು ಎನ್ನುವ ಅಂಬೇಡ್ಕರ್ ಅವರ ಮಾತು ಗಟ್ಟಿಯಾಗಬೇಕು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ ಪ್ರಭಾಕರ್ ಅಭಿಪ್ರಾಯಪಟ್ಟರು.

ಅವರು ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನಡೆದ “ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ”ದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಹಿರಿಯ ಪತ್ರಕರ್ತರಿಗೆ ಮಾಧ್ಯಮಶ್ರೀ ಪ್ರಶಸ್ತಿಗಳನ್ನು ವಿತರಿಸಿ ಮಾತನಾಡಿದರು. ಸ್ವಾತಂತ್ರ‍್ಯಹೋರಾಟವನ್ನು ಮುನ್ನಡೆಸಿದ್ದ ಭಾರತೀಯ ಪತ್ರಿಕೋದ್ಯಮ ಸಮಾಜವನ್ನು ಒಗ್ಗೂಡಿಸುವಲ್ಲಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಸ್ವಾತಂತ್ರ್ಯದ ನಂತರ ಅಭಿವೃದ್ಧಿಯಾದ ಪತ್ರಿಕೋದ್ಯಮ, ತನಿಖಾ ಪತ್ರಿಕೋದ್ಯಮದ ಮೂಲಕ ಸಮಾಜವನ್ನು ಎಚ್ಚರಿಸುವ ಹೊಣೆಗಾರಿಕೆ ನಿರ್ವಹಿಸಿದೆ. ಆದರೆ ಇಂದು ಅರೆಸತ್ಯ ಮತ್ತು ಸುಳ್ಳು ಸುದ್ದಿಗಳು ಭಾರತೀಯ ಪತ್ರಿಕೋದ್ಯಮದ ಈ ಮಹೋನ್ನತ ಘನತೆಯನ್ನು ಹಾಳುಗೆಡಹುವ ರೀತಿಯಲ್ಲಿ ಕೆಲಸ ಮಾಡುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು. ಪತ್ರಕರ್ತರೂ, ಸಂಪಾದಕರೂ ಆಗಿದ್ದ ಅಂಬೇಡ್ಕರ್ ಅವರು ಸಂಘಟನೆ ಮತ್ತು ಶಿಕ್ಷಣದ ಮಹತ್ವವನ್ನು ಒತ್ತಿ ಹೇಳಿದ್ದಾರೆ. ಸಂಘಟಕ ಧ್ವನಿ ಸರ್ಕಾರದ ಮತ್ತು ಸಮಾಜದ ಕಣ್ಣು ತೆರೆಸುತ್ತವೆ ಎಂದಿದ್ದರು. ಪತ್ರಿಕಾ ಸಂಘಟನೆಗಳು, ಪತ್ರಕರ್ತರ ಸಂಘಗಳು ಮಾಧ್ಯಮವನ್ನು ಜನಪರವಾಗಿ, ಭಯಮುಕ್ತವಾಗಿಡಲು ಪತ್ರಕರ್ತರು ಯಾವುದೇ ಹಿಂಜರಿಕೆಯಿಲ್ಲದೆ ವರದಿ ಮಾಡಲು ಇದು ಸಹಾಯ ಮಾಡುವ ರೀತಿಯಲ್ಲಿ ಶ್ರಮಿಸಬೇಕು. ಪತ್ರಕರ್ತರಿಗೆ ನೈತಿಕ ಮಾರ್ಗಸೂಚಿಗಳನ್ನು ಸ್ವಯಂಪ್ರೇರಿತವಾಗಿ ಅಳವಡಿಸಿಕೊಳ್ಳಲು ಉತ್ತೇಜಿಸಬೇಕು. ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ಬೇಡಿಕೆ ಈಡೇರಿಕೆಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲೆಯ ಹಿರಿಯ ಪತ್ರಕರ್ತ ಹೊಕ್ಕೇರಿ ಮಲ್ಲಿಕಾರ್ಜುನ ಸೇರಿ ಸಾಧಕರನ್ನು ಜೀವಮಾನದ ಸಾಧನೆಗಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪೂಜ್ಯ ವಿನಯ್ ಗುರೂಜಿ, ಅರಣ್ಯ ಸಚಿವ ಈಶ್ವರಖಂಡ್ರೆ, ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಸಂಘದ ಪದಾಧಿಕಾರಿಗಳಿದ್ದರು.

Leave a Reply