ಸಾರ್, ನನಗೆ ಹಾಡುವುದೆಂದರೆ ತುಂಬಾ ಇಷ್ಟ.ನಾನು ಅಶ್ವಿನಿ ಹರೀಶ್

ಸಾರ್, ನನಗೆ ಹಾಡುವುದೆಂದರೆ ತುಂಬಾ ಇಷ್ಟ.ನಾನು ಅಶ್ವಿನಿ ಹರೀಶ್

ನನ್ನ ಹೆಸರು ಅಶ್ವಿನಿ ಹರೀಶ್. ನಾನು 25-4-1984 ರಂದು ಹೊನ್ನವಳ್ಳಿಯಲ್ಲಿ ಜನಿಸಿದ್ದೇನೆ. ಈ ಊರು ಚಲನಚಿತ್ರ ಹಾಸ್ಯನಟ ಹೊನ್ನವಳ್ಳಿ ಕೃಷ್ಣ ಅವರ ಹುಟ್ಟೂರು.

ನನ್ನ ತಂದೆ-ತಾಯಿಗೆ ಎಂಟು ಮಂದಿ ಮಕ್ಕಳಿದ್ದು, ನಾನು ಏಳನೇ ಸ್ಥಾನದಲ್ಲಿದ್ದೇನೆ. ನಾನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಾಗೂ ಹೇಮಾವತಿ ಪ್ರೌಢಶಾಲೆಯಲ್ಲಿ 10ನೇ ತರಗತಿವರೆಗೆ ಓದಿದ್ದೇನೆ.

ಚಿಕ್ಕಂದಿನಿಂದಲೇ ನನಗೆ ಹಾಡು ಹಾಡುವುದು ಬಹಳ ಇಷ್ಟವಾಗಿತ್ತು. ಶಾಲಾ ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸಿ ಬಹುಮಾನಗಳನ್ನು ಗಳಿಸಿದ್ದೆ.

ಹೊಲದ ಹತ್ತಿರ ಕೆಲಸ ಮಾಡುವಾಗ ದನ ಮೇಯಿಸುವಾಗ ನನಗೆ ನಾನೇ ಹಾಡಿಕೊಳ್ಳುತ್ತಿದೆ. ಮನೆಯಲ್ಲಿ ಕೆಲಸ ಮಾಡುವಾಗಲು ಪಾತ್ರೆ ತೊಳೆಯುವಾಗಲು ಮನೆ ಸಾರಿಸುವಾಗಲೂ ಹಾಡು ಹೇಳುತ್ತಲೇ ಇದ್ದೆ.

ಪಿಯುಸಿ ವಿದ್ಯಾಭ್ಯಾಸಕ್ಕಾಗಿ ಅರಕಲಗೂಡು ಬಾಲಕಿಯರ ಪದವಿಪೂರ್ವ ಕಾಲೇಜಿಗೆ ಸೇರಿದ್ದೆ. ಆದರೆ ಆ ವೇಳೆ ನನ್ನ ತಂದೆ ನಿಧನರಾದರು.

ಕುಟುಂಬದ ಆರ್ಥಿಕ ತೊಂದರೆಗಳಿಂದಾಗಿ ವಿದ್ಯಾಭ್ಯಾಸ ಮುಂದುವರಿಯಲಿಲ್ಲ. ಆದರೂ ನಾನು ಹಾಡು ಹೋದ ಹಾದಿಯನ್ನು ತೊರೆದಿಲ್ಲ.

2006 ರಲ್ಲಿ “ಈ ಟಿವಿಯ ಹಾಡಿಗೊಂದು ಹಾಡು” ಕಾರ್ಯಕ್ರಮದ ಆಡಿಶನ್‌ ನಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಪಡೆದಿದ್ದೆ.

ಈ ಕಾರ್ಯಕ್ರಮದಲ್ಲಿ ಪ್ರಸಿದ್ಧ ಗಾಯಕಿ ಬಿ.ಆರ್. ಛಾಯ ಮತ್ತು ರವಿಶಂಕರ್ ಜ್ಯೂರಿಯಾಗಿ ಭಾಗವಹಿಸಿದ್ದರು.

ಅರಕಲಗೂಡಿಗೆ ಮನೆ ಬದಲಾಯಿಸಿದ ನಂತರ, ಜನಪದ ಕಲಾವಿದ ದೇವಾನಂದ್ ವರಪ್ರಸಾದ್ ಅವರು ಬೇಸಿಗೆ ಶಿಬಿರ ಆಯೋಜಿಸಿದ್ದರು.

ಅವರಿಗೆ ನನ್ನ ಮಗಳನ್ನು ಸೇರಿಸಲು ಹೋಗಿ ನನ್ನಲ್ಲಿದ್ದ ಗಾಯನ ಆಸಕ್ತಿಯನ್ನು ನೋಡಿ, ಅವರಿಗೆ ಹಾಡಲು ಅವಕಾಶ ನೀಡಿದರು.

ಮೈಸೂರು ದಸರಾ, ಕೋಟಿ ಕಂಠ ಗೀತೆ, YESHTEL ಟಿವಿ ಕಾರ್ಯಕ್ರಮಗಳಲ್ಲಿ ಜನಪದ ಗೀತೆಗಳನ್ನು ಹಾಡಿದ್ದೇನೆ.

ಮೈಸೂರು ಕಿರು ರಂಗಮಂದಿರದ ಜಾನಪದ ಹಬ್ಬದಲ್ಲಿ ‘ಸೋಜಿಗಾದ ಸೂಜುಮಲ್ಲಿಗೆ’ ಹಾಡು ಹಾಡಿ ಶ್ರೋತೃಗಳ ಮನಗೆದ್ದಿದ್ದೆ.

ದೇವಾನಂದ್ ಅವರ ಸಂಗೀತ ಸಂಯೋಜನೆಯಲ್ಲಿ “ದೂರದ ಬೆಟ್ಟ ನುಣ್ಣಗೆ” ಎಂಬ ನಾಟಕದಲ್ಲಿ ನಾನು ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದೆ.

ಸೋಬಾನೆ, ರಾಗಿ ಬೀಸೋ ಪದಗಳ ತರಬೇತಿ ಅವರು ನೀಡಿದರು. ಅವರ ಮಾರ್ಗದರ್ಶನದಿಂದ ನಾನು ಹೊಸ ಶೈಲಿಗಳನ್ನು ಕಲಿತೆ.

ಶೇಖರ್ ಅವರು ನನ್ನ ಚಲನಚಿತ್ರ ಗೀತೆಗಳ ಗಾಯನದ ಶೈಲಿಗೆ ಮಾರ್ಗದರ್ಶನ ನೀಡಿದ್ದಾರೆ. ಕರೋಕೆ ಪಾಠ ಕಲಿಸಿದ್ದಾರೆ.

ಅವರು ಆಯೋಜಿಸಿದ್ದ “ಸ್ವರ ಸಂಭ್ರಮ” ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸಿ ಬಹುಮಾನ ಹಾಗೂ ಸ್ಮರಣಿಕೆಗಳನ್ನು ಗಳಿಸಿದ್ದೆ.

ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಯೂತ್ ಮೇಳದಲ್ಲಿ ಜಿಲ್ಲಾ ಮಟ್ಟ, ವಿಭಾಗ ಮಟ್ಟ ಜಯಗಳಿಸಿ, ರಾಜ್ಯ ಮಟ್ಟಕ್ಕೆ ಆಯ್ಕೆಯಾದೆ.

ಆದರೆ ಕೋವಿಡ್ ಕಾರಣದಿಂದ ಭಾಗವಹಿಸಲು ಸಾಧ್ಯವಾಗಲಿಲ್ಲ. ಇದು ನನ್ನ ಸಂಗೀತ ಪಯಣದಲ್ಲಿ ಒಂದು ನಿರಾಸೆಯ ಹಂತವಾಯಿತು.

‘ಲಹರಿ’ ಎಂಬ ತಂಡವನ್ನು ತಯಾರಿಸಿ ವಿವಿಧ ಹಬ್ಬಗಳಲ್ಲಿ ಭಾಗವಹಿಸಿದ್ದೆ. ಹಳ್ಳಿ ಸಂಸ್ಕೃತಿ ಹಬ್ಬದಲ್ಲಿ ನನ್ನ ಮಗಳು ಹಾಗೂ ಮಕ್ಕಳು ಸೇರಿಕೊಂಡಿದ್ದೆವು.

ಅಲ್ಲಿ ಭಜನೆ, ನೃತ್ಯ, ಜನಪದ ಗೀತೆಗಳು, ಆರತಿ ಶಾಸ್ತ್ರದ ಹಾಡುಗಳೊಂದಿಗೆ ಪ್ರಥಮ ದ್ವಿತೀಯ ಬಹುಮಾನ ಗಳಿಸಿದ್ದೆವು.

ಅರಕಲಗೂಡು ದಸರಾ, ಗಣೇಶೋತ್ಸವ, ಶಿಕ್ಷಕರ ದಿನಾಚರಣೆಯಲ್ಲಿ ನಮ್ಮ ತಂಡದಿಂದ ಹಾಡುಗಳನ್ನು ಪ್ರಸ್ತುತಪಡಿಸಿದ್ದೆವು.

ಹಾಸನ ಜಿಲ್ಲೆಯ ಬರಹಗಾರರ ಸಂಘದ ಅಧ್ಯಕ್ಷ ಸುಂದರೇಶ್ ಡಿ. ಉಡುವಾರೆ ಅವರು ಕರೀಂಖಾನ್ ಪ್ರಶಸ್ತಿ ನೀಡಿ ಗೌರವಿಸಿದರು.

ಕರ್ನಾಟಕ ಬರಹಗಾರರ ಸಂಘದ ರಾಜ್ಯಾಧ್ಯಕ್ಷ ಮಧು ನಾಯಕ್ ಲಂಬಾಣಿ ಅವರು ನಡೆಸಿದ ಆನ್‌ಲೈನ್ ಸ್ಪರ್ಧೆಯಲ್ಲಿ ಆಯ್ಕೆಯಾಗಿ ಗೌರವ ಪಡೆದೆ.

2024ರ ಶಿವಮೊಗ್ಗ “ಕನ್ನಡ ನುಡಿ ವೈಭವ” ಕಾರ್ಯಕ್ರಮದಲ್ಲಿ ನನಗೆ ‘ಗಾನಕೋಗಿಲೆ’ ಪ್ರಶಸ್ತಿ ನೀಡಿ ಸನ್ಮಾನಿಸಿದರು.

ಗೊರೂರು ಅನಂತರಾಜು, ಹಾಸನ.
9449462879
ವಿಳಾಸ: ಹುಣಸಿನಕೆರೆ ಬಡಾವಣೆ,
29ನೇ ವಾರ್ಡ್, 3 ನೇ ಕ್ರಾಸ್,
ಶ್ರೀ ಶನೈಶ್ಚರ ದೇವಸ್ಥಾನ ರಸ್ತೆ,
ಹಾಸನ-573201

Leave a Reply