ನಾಳೆಗಳು ನಮ್ಮದೆನಿಸಿವೆ ಭರವಸೆಯ.. ತಾಯಿ ಮತ್ತು ಅವಳಿ ಮಕ್ಕಳ ಕಲಾಪರಿಚಯ – ಗೊರೂರು ಅನಂತರಾಜು, ಹಾಸನ.

ನಾಳೆಗಳು ನಮ್ಮದೆನಿಸಿವೆ ಭರವಸೆಯ.. ತಾಯಿ ಮತ್ತು ಅವಳಿ ಮಕ್ಕಳ ಕಲಾಪರಿಚಯ – ಗೊರೂರು ಅನಂತರಾಜು, ಹಾಸನ.

ನಾಳೆಗಳು ನಮ್ಮದೆನಿಸಿವೆ ಭರವಸೆಯ ನಾಳೆಗಳು ನಮ್ಮದೆನಿಸಿವೆ ಎಂಬ ಒಂದು ಸೊಗಸಾದ ಹಾಡಿಗೆ ಕಲ್ಬುರ್ಗಿ ಜಿಲ್ಲೆ ಚಿಂಚೋಳಿ ತಾಲ್ಲೂಕು ಕಲ್ಲುರೋಡ ಗ್ರಾಮದ ಮಹಾನಂದ ಮಠಪತಿ ಮೇಡಂ ತಮ್ಮ ಕಲೆಗಾರಿಕೆ ಪೋಟೋಗಳನ್ನು ಅಳವಡಿಸಿ ಒಂದು ವಿಡಿಯೋ ಮಾಡಿದೆ.

ಅದನ್ನು ಹೂವಿನಹಡಗಲಿಯ ಕತೆಗಾರ ಮಧುನಾಯ್ಕ್ ಲಂಬಾಣಿ ಗ್ರೂಪ್‌ನಲ್ಲಿ ಹಾಕಿದ್ದರು.

ಅನಂತರಾಜ್ ಸರ್, ಚಿಕ್ಕಮಗಳೂರಿನಲ್ಲಿ ನಮ್ಮ ಕರ್ನಾಟಕ ರಾಜ್ಯ ಬರಹಗಾರರ ಸಂಘ ಚಿಕ್ಕಮಗಳೂರು ಜಿಲ್ಲಾ ಘಟಕದ ಸಹಕಾರದಲ್ಲಿ ಇತ್ತೀಚಿಗೆ ನಡೆಸಿತ್ತಲ್ಲಾ ರಾಜ್ಯಮಟ್ಟದ ಗಾಯನ ಸ್ಫರ್ಧೆ ಇಲ್ಲಿ ಭಾಗವಹಿಸಿದ್ದ ಗಾಯಕಿ ಮಹಾನಂದ ಮಠಪತಿ ಮಗಳು ನೃತ್ಯಗಾರ್ತಿ ಅಭಿಶ್ರೀ ಇವರ ಕಲಾ ಪರಿಚಯ ಮಾಡಿ ಎಂದು ಕೊಂಚವೆ ಮಾಹಿತಿ ಕಳಿಸಿದ್ದರು.

ಅಲ್ಲಿ ತೀರ್ಪುಗಾರನಾಗಿ ಭಾಗವಹಿಸಿದ್ದ ನಾನು, ಮೇಡಂ ರ ಹಾಡನ್ನು ಆಗ ಕೇಳಿದ್ದೆನು, ಆದರೆ ಪರಿಚಯ ಇರಲಿಲ್ಲ. ಮೇಡಂ ನಂಬರ್ ಪಡೆದು ಮಾತನಾಡುತ್ತಾ ಅವರು ತಮ್ಮ ಕಲಾ ಪರಿಚಯ ಹೇಳಿಕೊಂಡರು.

ನಾನು ಶಾಲಾ ದಿನಗಳಲ್ಲಿ ಭರತನಾಟ್ಯ ,ಶ್ಲೋಕ, ವಚನ ಗಾಯನ, ಭಾವಗೀತೆ, ಜಾನಪದ ಗೀತೆ, ಭಕ್ತಿ ಗೀತೆ.. ಹೀಗೆ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸುತ್ತಿದ್ದೆನು.

ನಾನು ಹತ್ತನೇ ತರಗತಿ ಮುಗಿಸಿದ ನಂತರ ನನಗೆ ೧೭ ವರ್ಷಕ್ಕೆ ನಮ್ಮ ಸಂಬಂಧಿಕರಲ್ಲಿ ಮದುವೆ ಮಾಡಿಕೊಡಲಾಯಿತು.

ನನಗೆ ಏಳು ವರ್ಷಗಳ ಬಳಿಕ ಎರಡು ಅವಳಿ ಮಕ್ಕಳು ಹುಟ್ಟಿದರು. ಮಕ್ಕಳು ಹುಟ್ಟಿದ ಒಂದು ವರ್ಷಕ್ಕೆ ನನ್ನ ಪತಿಯನ್ನು ಕಳೆದುಕೊಂಡೆನು. ನಂತರ ನಾನು ಮತ್ತೆ ಶಿಕ್ಷಣ ಮುಂದುವರಿಸಿದೆನು.

ಪಿಯುಸಿ, ಬಿಎ ಎಕ್ಸಾಮ್ ಬರೆದೆನು. ಲಾಕ್ಡೌನ್ ಟೈಮ್ ನಲ್ಲಿ ಮನೆಯಲ್ಲೇ ಭರತನಾಟ್ಯ ಹರ‍್ಮೋನಿಯಂ ಎರಡು ಮಕ್ಕಳಿಗೆ ಫೋನಲ್ಲಿ ನೋಡುತ್ತಾ ಕಲಿಸುತ್ತಿದ್ದೆನು. ನಾವು ಗುರುಗಳ ಹತ್ತಿರ ಕಲಿಬೇಕು ಅಂದ್ರೆ ನಮಗೆ ಯಾವುದೇ ರೀತಿ ಅನುಕೂಲ ಇರಲಿಲ್ಲ.

೨೦೧೬ ರಿಂದ ೨೦೨೪ ರವರೆಗೆ ಶಾಲಾ ಸಂಗೀತ ಶಿಕ್ಷಕಿಯಾಗಿ ಸೇವೆ ಮಾಡುತ್ತಿದ್ದೆ. ನನಗೆ ಭರತನಾಟ್ಯ ಮತ್ತು ಸಂಗೀತ ಅಂದರೆ ತುಂಬಾ ಆಸಕ್ತಿ ಇದೆ.

ನನಗೆ ತಿಳಿದಿದ್ದು ಮಕ್ಕಳಿಗೆ ಕಲಿಸುತ್ತಿದ್ದೇನೆ. ಇದಕ್ಕೆ ನನ್ನ ತಂದೆ-ತಾಯಿ, ಅತ್ತೆ ಸ್ನೇಹ ಬಳಗ ಸಹಾಯ ಮಾಡಿ ಪ್ರೋತ್ಸಾಹಿಸಿದ್ದಾರೆ.

ಪ್ರತಿ ತಿಂಗಳು ನಮ್ಮ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಅಂದರೆ ಬಸವಣ್ಣನವರ ಕುರಿತು ಸಾಮಾಜಿಕ ವಿಷಯಗಳ ಬಗ್ಗೆ ಅರಿವು ಮೂಡಿಸುವ ಚಿಂತನ ಕಾರ್ಯಕ್ರಮ ನಮ್ಮ ಮನೆಯವರು ಇದ್ದಾಗ ಮಾಡುತ್ತಿದ್ದರು.

ಅದನ್ನು ಹಾಗೆ ಬಿಡುವುದು ಬೇಡ ಎಂದು ನಾನು ನನ್ನ ಜನ್ಮ ದಿನದಂದು ಈ ಕಾರ್ಯಕ್ರಮ ಮಾಡಿ ನನ್ನಂತೆಯೇ ಕಲಾಕ್ಷೇತ್ರದ ಸಾಧಕರನ್ನು ಸನ್ಮಾನಿಸಿರುವೆ.

ನಾನು ಮಾಡಿರುವಂತಹ ಕಾರ್ಯಕ್ರಮ ತುಂಬಾ ಯಶಸ್ವಿಯಾಗಿತ್ತು ಅಂತ ಹೇಳಿದ್ದಾರೆ ಎಲ್ಲರು. ಊರಿನಲ್ಲಿ ಯಾವುದೇ ಒಂದು ಕರ್ಯಾಕ್ರಮ ಇರಲಿ ಆ ಎಲ್ಲಾ ಕಾರ್ಯಕ್ರಮಗಳಿಗೆ ನಮ್ಮನ್ನು ಕರೆಯುತ್ತಿದ್ದರು.

ರಾಯಚೂರಿನ ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ೩೫೩ನೇ ಶ್ರೀರಾಯರ ಆರಾಧನೆಯ ಕಾರ್ಯಕ್ರಮ ನಡೆಯುತಿತ್ತು.

ಇದರ ಅಂಗವಾಗಿ ಮಂತ್ರಾಲಯದ ರಾಘವೇಂದ್ರಸ್ವಾಮಿಗಳವರ ಮಠ ಹಾಗೂ ಚನ್ನರಾಯಪಟ್ಟಣದ ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ಮಠದ ಮುಂಭಾಗ ರಾಜ ಬೀದಿಯಲ್ಲಿ ದೇಶ-ವಿದೇಶದ ೩೫೦ ನೃತ್ಯಗಾರರು ಏಕಕಾಲಕ್ಕೆ ನಾಮ ರಾಮಾಯಣಂ ನೃತ್ಯ ಪ್ರದರ್ಶಿಸಿ ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ೨೦೨೪ರಲ್ಲಿ ಆಗಿದೆ.

ಜಪಾನ್, ಜರ್ಮನಿ, ಇಂಡೋನೇಷಿಯಾ ದೇಶ ಸೇರಿದಂತೆ ಭಾರತ ದೇಶದ ಹಲವಾರು ರಾಜ್ಯದಿಂದ ಕಲಾವಿದರು ಆಗಮಿಸಿದ್ದರು.

ಕಲಾವಿದರಿಗೆ ರಾಯರ ದರ್ಶನ ಮಾಡಿಸುವ ಮೂಲಕ ಈ ನೃತ್ಯೋತ್ಸವ ಸಂಭ್ರಮ ರಾಯರ ಪಾದದಲ್ಲಿ ಸಮರ್ಪಣೆ ಮಾಡಿತು.

ಅದರಲ್ಲಿ ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿಯ ಮುಖ್ಯಸ್ಥ ಅರವಿಂದಸಿಂಗ್, ಪ್ರಧಾನ ಕಾರ್ಯದರ್ಶಿ ಮತ್ತು ನೃತ್ಯಗಾರ್ತಿ ಸ್ವಾತಿ ಪಿ. ಭಾರದ್ವಾಜ್ ಅವರನ್ನು ಮರೆಯುವಂತಿಲ್ಲ.

ಈ ತಂಡದಲ್ಲಿ ತಾಯಿ ಮಹಾನಂದ ಮಠಪತಿ ಮತ್ತು ಮಗಳು ಅಭಿಶ್ರೀ ಇದ್ದು ಸರ್ಟಿಫಿಕೇಟ್ ಪಡೆದಿದ್ದಾರೆ.

ಇವರ ದೊಡ್ಡ ಮಗಳು ಅನುಶ್ರೀ ಹರ‍್ಮೋನಿಯಂ ಮತ್ತು ಪಿಯಾನ ಕಲಿಯುತ್ತಿದ್ದಾಳೆ. ವಚನ ಗಾಯನ, ಹರ‍್ಮೋನಿಯಂ ಜೊತೆ ಫೋನಲ್ಲಿ ನೋಡಿ ಕಲಿಸುತ್ತಿದ್ದೇನೆ ಎಂದರು.

ನಾನು ಕಲರ್ಸ್ ಕನ್ನಡ ದಲ್ಲಿ ಅಡಿಶನ್ ಕೊಟ್ಟಿದ್ದೇನೆ ಹಾಡು ಕರ್ನಾಟಕ ಹಾಗೆ ಜೀ ಕನ್ನಡದಲ್ಲಿ ಸರಿಗಮಪದಲ್ಲಿ ಭಾಗವಹಿಸಿದ್ದೇನೆ.

೨೦೨೪ರಲ್ಲಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನಲ್ಲಿ ಎರಡು ಮಕ್ಕಳ ಜೊತೆ ನಾನು ಕೂಡ ಡಾನ್ಸ್ ಮಾಡಿದ್ದೇನೆ.

ಅದರಲ್ಲಿ ನನ್ನ ಚಿಕ್ಕ ಮಗಳು ಅಭಿಶ್ರೀಗೆ ನೀನು ತುಂಬಾ ಚೆನ್ನಾಗಿ ಡಾನ್ಸ್ ಮಾಡ್ತೀಯಾ ಅಂತ ಹೇಳಿ ಪವರ್ ಸ್ಟಾರ್ ಶೀಲ್ಡು ಕೊಟ್ಟಿದ್ದರು.

೧೧ ವರ್ಷದ ಅಭಿಶ್ರೀ ೨೭ ರಾಜ್ಯಮಟ್ಟದ ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ ಈಕೆ ಕೂಡ ನೃತ್ಯ ಕ್ಷೇತ್ರದ ಚಿಗುರು ಪ್ರತಿಭೆ.

ಶ್ರೀ ವೀರೇಂದ್ರಪಾಟೀಲ್ ಪಬ್ಲಿಕ್ ಸ್ಕೂಲ್ ಚಿಂಚೋಳಿಯಲ್ಲಿ ೫ ನೇ ತರಗತಿ ವ್ಯಾಸಂಗ ಮಾಡುತ್ತಿರುವ ಅವಳಿ ಸಹೋದರಿಯರು ಓದಿನಲ್ಲಿ ಮುಂದಿರುವರು.

ನೃತ್ಯ ಪ್ರತಿಭೆ ಅಭಿಶ್ರೀ ಇಲ್ಲಿಯವರೆಗೆ ಪಡೆದ ಪ್ರಶಸ್ತಿಗಳು ಕನ್ನಡದ ಚಿನ್ನ ಪ್ರಶಸ್ತಿ, ಕನ್ನಡ ಸಾಹಿತ್ಯ ಸಮ್ಮೇಳನ ಸನ್ಮಾನ, ತಾಲೂಕು ಬಸವ ಕೇಂದ್ರ ಸನ್ಮಾನ, ಡ್ಯಾನ್ಸ್ ಫಾರ್ ಇಂಡಿಯಾ ಬೆಂಗಳೂರು, ಟ್ಯಾಲೆಂನ್ಟ್ ಸ್ಟಾರ್ ಅವಾರ್ಡ್ ಬೀದರ್, ಸ್ವಾಮಿ ವಿವೇಕಾನಂದ ಶಾಲೆಯಿಂದ ಸನ್ಮಾನ, ಶ್ರೀ ಹಾಲಪ್ಪಯ್ಯ ವಿರಕ್ತ ಮಠ ಸೇಡಂ ಸನ್ಮಾನ, ಕರ್ನಾಟಕ ರಾಜ್ಯ ಬರಹಗಾರರ ಸಂಘದ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹೀಗೆ ಮಗಳ ಸಾಧನೆ ಹಂಚಿಕೊಂಡರು.

೨೦೨೧ರಲ್ಲಿ ಮಹಾನಂದ ಮಠಮತಿ ಅವರು ಚಿಂಚೊಳ್ಳಿ ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ.

ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನ ಹಡಗಲಿ ಇವರು ಪ್ರತಿ ಭಾನುವಾರ ನಡೆಸುತ್ತಿರುವ ವಿವಿಧ ಹಾಡುಗಳ ಸ್ಪರ್ಧೆಯಲ್ಲಿ ನಾನು ಹಾಡುತ್ತಿರುವುದು ನನಗೆ ಇನ್ನಷ್ಟು ಹೊಸ ಹಾಡು ಕಲಿಯುವುದಕ್ಕೆ ಅನುಕೂಲವಾಗಿದೆ.

ನಾನು ಪ್ರತಿ ವಾರ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆ ಆಗಿ ಚಿಕ್ಕಮಗಳೂರುನಲ್ಲಿ ರಾಜ್ಯಮಟ್ಟದ ಕನ್ನಡ ಕೋಗಿಲೆ ಪ್ರಶಸ್ತಿ ಪಡೆದಿದ್ದೇನೆ.

ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನಹಡಗಲಿ ಹೀಗೆ ಕಾರ್ಯಕ್ರಮ ಮಾಡುತ್ತಿರುವುದರಿಂದ ಮರೀಚಿಕೆಯಾಗಿ ಉಳಿದುಕೊಂಡಿರುವ ನನ್ನಂತಹ ಕೆಲ ಕಲಾವಿದರು ಹೊರ ತರಲು ಕಾರಣರಾಗಿರುವ ರಾಜ್ಯಧ್ಯಕ್ಷ ಮಧುನಾಯ್ಕ ಲಂಬಾಣಿ ಸರ್ ಗೆ ನನ್ನ ನಮನಗಳು ಎಂದು ಮಾತು ಮುಗಿಸಿದರು.

ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯.
ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ-೫೭೩೨೦೧

 

Leave a Reply