ಗಂಗಾವತಿ: ನಗರದ ಐ.ಎಂ.ಎ ಹಾಲ್‌ನಲ್ಲಿ ಸೆಪ್ಟೆಂಬರ್-೨೨ ರಂದು ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ಕೊಪ್ಪಳ ಜಿಲ್ಲಾ ಘಟಕದಿಂದ ಗಂಗಾವತಿ ತಾಲೂಕ ಘಟಕ ಉದ್ಘಾಟನೆ, ಪದಾಧಿಕಾರಿಗಳ ಪದಗ್ರಹಣ ಹಾಗೂ ವಿಶ್ವ ಪತ್ರಿಕಾ ದಿನಾಚರಣೆ ಕಾರ್ಯಕ್ರಮವು ಅಚ್ಚುಕಟ್ಟಾಗಿ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ರಾಜ್ಯಾಧ್ಯಕ್ಷರಾದ ಜಿ.ಎಂ ರಾಜಶೇಖರ ವಹಿಸಿ ಅವರು ಪ್ರಾಸ್ತಾವಿಕ ಮಾತನಾಡಿ, ಈ ಸಂಘಕ್ಕೆ ೭೦-೮೦ ವರ್ಷಗಳ ಇತಿಹಾಸವಿದ್ದು, ೧೯೩೬ ರಲ್ಲಿ ಕೇವಲ ತಾಲೂಕು ಸಂಘಟನೆಯಾಗಿ, ಸ್ವಾತಂತ್ರ್ಯಾ ನಂತರ ಆಗಿನ ಮುಖ್ಯಮಂತ್ರಿಗಳಾದ ನಿಜಲಿಂಗಪ್ಪ ಅವರಿಂದ ಜಿಲ್ಲಾ ಸಂಘವಾಗಿ, ಈಗ ರಾಜ್ಯಮಟ್ಟದ ಸಂಘವಾಗಿ ಬೆಳೆದಿದೆ. ಇತ್ತೀಚೆಗೆ ಈ ಸಂಘವು ಉದ್ಘಾಟನೆಗೊಂಡು ರಾಜ್ಯದಲ್ಲಿ ಮೈಸೂರು, ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ ಹಾಗೂ ಬೆಂಗಳೂರು ಎಂದು ನಾಲ್ಕು ಭಾಗಗಳನ್ನಾಗಿ ಮಾಡಿಕೊಂಡು ಸಂಘಟನೆಯನ್ನು ಬೆಳೆಸುವ ಮೂಲಕ ಪತ್ರಕರ್ತರ ಸಮಸ್ಯೆಗಳು, ಅವರ ಮೇಲಾಗುತ್ತಿರುವ ಕಿರುಕುಳಗಳು, ಅವರ ಆರ್ಥಿಕ ಪರಿಸ್ಥಿತಿ ಹಾಗೂ ಸರ್ಕಾರದಿಂದ ಅವರಿಗೆ ಸಿಗಬೇಕಾದ ಭದ್ರತೆಯ ಕುರಿತಾಗಿ ಸರ್ಕಾರದ ಮಟ್ಟದಲ್ಲಿ ಗಮನಕ್ಕೆ ತರಲು ಸಂಘವು ಸಿದ್ಧವಾಗಿದೆ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿದ್ದ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾದ ಕೆ. ನಿಂಗಜ್ಜ ಅವರು ಮಾತನಾಡಿ, ಪತ್ರಿಕಾ ಮಾಧ್ಯಮದ ಇತಿಹಾಸ ಕುರಿತು ತಿಳಿಸುತ್ತಾ, ಮಾದ್ಯಮ ಅಕಾಡೆಮಿಯಿಂದ ಹಮ್ಮಿಕೊಳ್ಳಲಾಗುತ್ತಿರುವ ಕಾರ್ಯಕ್ರಮಗಳ ಕುರಿತಾಗಿ ಮಾಹಿತಿ ನೀಡಿ, ಪತ್ರಕರ್ತರು ಸಾಮಾಜಿಕ ಜವಾಬ್ಧಾರಿ ಹೊಂದಿರಬೇಕು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾ ರಂಗಕ್ಕೆ ಬಹಳ ಪ್ರಾಮುಖ್ಯತೆ ಇದ್ದು, ಅದರ ಪ್ರಾಮುಖ್ಯತೆಯನ್ನು ಪತ್ರಕರ್ತರು ಉಳಿಸಿಕೊಂಡು ಹೋಗಬೇಕು. ಈಗಿನ ಆಧುನಿಕ ಜಗತ್ತಿನಲ್ಲಿ ಎಷ್ಟೇ ಸಾಮಾಜಿಕ ಜಾಲತಾಣ ಅಭಿವೃದ್ಧಿ ಹೊಂದಿದ್ದರೂ, ಮುದ್ರಣಾ ಮಾಧ್ಯಮಕ್ಕೆ ಅದರದೇ ಆದ ಮಹತ್ವ ಹಾಗೂ ಪ್ರಾಮುಖ್ಯತೆ ಇದೆ ಎಂದು ಉಪನ್ಯಾಸ ನೀಡಿದರು.
ಇದೇ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾಜಿ ಶಾಸಕ ಪರಣ್ಣ ಮುನವಳ್ಳಿಯವರು, ನಗರಸಭೆಯ ಅಧ್ಯಕ್ಷೆಯಾದ ಶ್ರೀಮತಿ ಹೀರಾಬಾಯಿ ಸಿಂಗ್, ಬಿಜೆಪಿ ಮುಖಂಡರಾದ ವಿರುಪಾಕ್ಷಪ್ಪ ಸಿಂಗನಾಳ, ಮಾಜಿ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ವಕೀಲರು, ಜಿ. ಶ್ರೀಧರ ಕೇಸರಹಟ್ಟಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಎಸ್.ಬಿ ಖಾದ್ರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಹೆಚ್.ಬಿ. ನಟೇಶ್, ಲಿಟಲ್ ಹಾರ್ಟ್ಸ್ ಶಾಲೆಯ ಕಾರ್ಯದರ್ಶಿ ಜಗನ್ನಾಥ ಆಲಂಪಲ್ಲಿ, ಹಿರಿಯ ಕಾರ್ಮಿಕ ಮುಖಂಡ ಜೆ. ಭಾರಧ್ವಾಜ್, ಕಾಂಗ್ರೆಸ್ ಮುಖಂಡ ಎಸ್.ಬಿ ಖಾದ್ರಿ, ಕನ್ನಡಪರ ಸಂಘಟನೆ ಮುಖಂಡ ಸೈಯ್ಯದ್ ಜಿಲಾನಿ ಪಾಷಾ ಖಾದ್ರಿ, ದಲಿತಪರ ಸಂಘಟನೆಗಳ ಮುಖಂಡರಾದ ಹುಲುಗಪ್ಪ ಮಾಗಿ, ಹಂಪೇಶ ಹರಿಗೋಲು, ಶಂಕರ್, ಹುಸೇನಪ್ಪ ಹಂಚಿನಾಳ, ಮಂಜುನಾಥ ಕಳ್ಳಿಮನಿ ಸೇರಿದಂತೆ ಇನ್ನಿತರರು ಪತ್ರಕರ್ತರು ಎದುರಿಸುತ್ತಿರುವ ಸವಾಲುಗಳ ಕುರಿತು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಸಂಘದ ಕೊಪ್ಪಳ ಜಿಲ್ಲಾಧ್ಯಕ್ಷರಾದ ರಮೇಶ ಕೋಟಿಯವರಿಗೆ ರಾಜ್ಯಾಧ್ಯಕ್ಷರು ನೇಮಕಾತ್ರಿ ಪತ್ರ ವಿತರಣೆ ಮಾಡಿದರು. ಅದೇರೀತಿ ಗಂಗಾವತಿ ತಾಲೂಕು ಅಧ್ಯಕ್ಷ ಸಿ.ಡಿ ರಾಮಕೃಷ್ಣ ಹಾಗೂ ಪ್ರಧಾನ ಕಾರ್ಯದರ್ಶಿ ಚನ್ನಬಸವ ಮಾನವಿ ಅವರುಗಳಿಗೆ ಜಿಲ್ಲಾ ಘಟಕದಿಂದ ನೇಮಕಾತಿ ಪತ್ರ ನೀಡಲಾಯಿತು.
ಈ ಸಂದರ್ಭದಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ವಸಂತಕುಮಾರ, ರಾಜ್ಯ ಪದಾಧಿಕಾರಿಯಾದ ಪ್ರಶಾಂತ್ ರವರು ಹಾಗೂ ರಾಜ್ಯ ಸಮಿತಿ ಸದಸ್ಯರಾದ ಹೆಚ್. ಮಲ್ಲಿಕಾರ್ಜುನ ಹೊಸಕೇರಾ, ಗಂಗಾವತಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಡಾ|| ಶಿವಕುಮಾರ ಮಾಲಿಪಾಟೀಲ್ ಉಪಸ್ಥಿತರಿದ್ದರು.
ಸಂಘದ ಕೊಪ್ಪಳ ಜಿಲ್ಲಾ ಘಟಕದಿಂದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಎಲ್ಲರಿಗೂ ಸನ್ಮಾನಿಸಿ ಗೌರವಿಸಲಾಯಿತು. ಕೊನೆಯಲ್ಲಿ ರಾಜ್ಯ ಘಟಕದಿಂದ ಮಾಧ್ಯಮಶ್ರೀ ಪ್ರಶಸ್ತಿ ಪುರಸ್ಕೃತ ಮಲ್ಲಿಕಾರ್ಜುನ ಹೊಸಕೇರಾ ಅವರಿಗೆ ಹಾಗೂ ಕೊಪ್ಪಳ ಜಿಲ್ಲಾಧ್ಯಕ್ಷ ರಮೇಶ ಕೋಟಿ ಅವರಿಗೆ ಹಾಗೂ ಗಂಗಾವತಿ ತಾಲೂಕಿನ ಎಲ್ಲಾ ಪದಾಧಿಕಾರಿಗಳಿಗೆ ಸನ್ಮಾನಿಸಲಾಯಿತು.
ವಿವಿಧ ಜಿಲ್ಲೆ, ವಿವಿಧ ತಾಲೂಕು ಹಾಗೂ ಗ್ರಾಮೀಣ ಪ್ರದೇಶಗಳಿಂದ ಕರ್ನಾಟಕ ಮಾದ್ಯಮ ಪತ್ರಕರ್ತರ ಸಂಘದ ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶಿಕ್ಷಕರಾದ ಶಿವಾನಂದ ತಿಮ್ಮಾಪುರ ನಿರೂಪಿಸಿದ ಈ ಕಾರ್ಯಕ್ರಮದಲ್ಲಿ ರಮೇಶ ಕೋಟಿ ಸ್ವಾಗತಿಸಿದರೆ, ಜೆ. ಶ್ರೀನಿವಾಸ ವಂದನಾರ್ಪಣೆ ಸಲ್ಲಿಸಿದರು.