ಗಂಗಾವತಿ: ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ) ಬೆಂಗಳೂರು ವತಿಯಿಂದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನಲ್ಲಿ ಸ್ಥಳೀಯ ಘಟಕದ ಸಹಕಾರದಲ್ಲಿ ನಗರದ ಶ್ರೀ ಚನ್ನಬಸವೇಶ್ವರ ಕಲಾಮಂದಿರದಲ್ಲಿ ಹಮ್ಮಿಕೊಂಡಿರುವ ಹಿರಿಯ ಸಾಹಿತಿ, ಘನ ವಿದ್ವಾಂಸರಾದ ಪ್ರಾಚಾರ್ಯ ಡಾ. ಜಾಜಿ ದೇವೇಂದ್ರಪ್ಪನವರ ಸರ್ವಾಧ್ಯಕ್ಷತೆಯಲ್ಲಿ ೨೦೨೫ ಜನವರಿ-೧೯ ಭಾನುವಾರ ಬೆಳೆಗ್ಗೆ ೦೯ ಗಂಟೆಯಿಂದ ಸಂಜೆ ೦೭ ಗಂಟೆವರೆಗೂ ಇಡೀ ದಿನ ಸಮ್ಮೇಳನ ನಡೆಯಲಿದ್ದು, ಉದ್ಘಾಟನಾ ಸಮಾರಂಭ ಸೇರಿದಂತೆ ಎರಡು ರಾಜ್ಯಮಟ್ಟದ ಕವಿಗೋಷ್ಠಿಗಳು ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಕೇಂದ್ರ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ತಿಳಿಸಿದರು.
ಅವರು ಗಂಗಾವತಿಯ ಕಲ್ಯಾಣನಗರದ ಡಾ. ಜಾಜಿ ದೇವೇಂದ್ರಪ್ಪನವರ ಮನೆಯಲ್ಲಿ ಅಖಿಲ ಕರ್ನಾಟಕ ನಾಲ್ಕನೇ ಕವಿಕಾವ್ಯ ಸಮ್ಮೇಳನದ ಸರ್ವಾಧ್ಯಕ್ಷರಿಗೆ ಅಧಿಕೃತ ಆಹ್ವಾನ ನೀಡಿ ಮಾತನಾಡಿ, ಬಸವಾದಿ ಶಿವಶರಣರ ಹಾಗೂ ಕುವೆಂಪು, ವಿವೇಕಾನಂದರ ಚಿಂತನಾ ತತ್ವಗಳಡಿಯಲ್ಲಿ ಸಮಸಮಾಜದ ಕನಸೊತ್ತು ಕಳೆದ ಏಳೆಂಟು ವರ್ಷಗಳಿಂದ ಎಲೆಮರೆ ಕಾಯಿಯಂತಹ ಸಾಧಕರನ್ನು ಗುರುತಿಸಿ ಸಾಮಾಜಿಕ ಮುನ್ನೆಲೆಗೆ ತರುವ ನಿಟ್ಟಿನಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಸೇರಿದಂತೆ ಮಹಾರಾಷ್ಟ್ರ, ಕೇರಳ, ಆಂದ್ರಪ್ರದೇಶ ಹಾಗೂ ಹೊರದೇಶಗಳಲ್ಲಿ ನಮ್ಮ ವೇದಿಕೆ ನಿರಂತರವಾಗಿ ಪ್ರತಿ ಕಾರ್ಯನಿರ್ವಹಿಸುತ್ತಿದೆ. ಗಂಗಾವತಿಯಲ್ಲಿ ಸಾಹಿತಿ ಶರಣಪ್ಪ ತಳ್ಳಿ ಕುಪ್ಪಿಗುಡ್ಡರವರ ನೇತೃತ್ವದಲ್ಲಿ ಗಂಗಾವತಿ ತಾಲ್ಲೂಕು ಘಟಕದವತಿಯಿಂದ ವಿಚಾರಗೋಷ್ಠಿ, ಕೃತಿ ವಿಮರ್ಶೆ, ಕವಿಗೋಷ್ಠಿ, ಕೃತಿ ಲೋಕಾರ್ಪಣೆ ಸೇರಿದಂತೆ ಅನೇಕ ಮೌಲ್ಯಯುತ ಕಾರ್ಯಕ್ರಮಗಳನ್ನು ಈಗಾಗಲೇ ಮಾಡಿದ್ದಾರೆ. ಪ್ರಸ್ತುತ ಜಿಲ್ಲಾಧ್ಯಕ್ಷೆ ಅನಸೂಯ ಜಹಗೀರದಾರ, ಹಿರಿಯ ಸಾಹಿತಿ, ಸಂಘಟಕಿ, ಸಾಮಾಜಿಕ ಹೋರಾಟಗಾರ್ತಿ ಶೈಲಜಾ ಹಿರೇಮಠ, ಸಾಹಿತಿಗಳಾದ ನಾಗಭೂಷಣ ಅರಳಿ, ರಮೇಶ ಗಬ್ಬೂರು, ಮಹಾದೇವ ಮೋಟಿ, ಯಲ್ಲಪ್ಪ ಕಲಾಲ್, ಅಶೋಕ್ ಕುಮಾರ್ ರಾಯ್ಕರ್, ಡಾ|| ಅಮರ್ ಮಕ್ಕಳ ತಜ್ಞರು, ಡಾ|| ಶಿವಕುಮಾರ ದಂತ ವೈದ್ಯರು ಮುಂತಾದವರ ಮುಖಂಡತ್ವದಲ್ಲಿ ನಾಲ್ಕನೇ ಕವಿಕಾವ್ಯ ಸಮ್ಮೇಳನ ಆಯೋಜನೆಗೊಳ್ಳುತ್ತಿದೆ. ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಿದರು.
ಸಮ್ಮೇಳನದ ನಿಯೋಜಿತ ಸರ್ವಾಧ್ಯಕ್ಷರಾದ ಡಾ. ಜಾಜಿ ದೇವೇಂದ್ರಪ್ಪನವರು ಅಧಿಕೃತ ಆಹ್ವಾನ ಸ್ವೀಕರಿಸಿ ಮಾತನಾಡಿ ಕನ್ನಡ ಸಾಹಿತ್ಯ, ಸಂಸ್ಕೃತಿ, ಸಂಶೋಧನೆ, ಚಿಂತನೆಯಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ನನ್ನ ಪಾಡಿಗೆ ನಾನು ಕೆಲಸ ಮಾಡಿಕೊಂಡು ಬಂದಿದ್ದೇನೆ. ಈ ಹಿನ್ನೆಲೆಯಲ್ಲಿ ಕೊಟ್ರೇಶ್ ಎಸ್. ಉಪ್ಪಾರ್ ನೇತೃತ್ವದ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯು ಗಂಗಾವತಿಯಲ್ಲಿ ಹಮ್ಮಿಕೊಂಡಿರುವ ಅಖಿಲ ಕರ್ನಾಟಕ ನಾಲ್ಕನೇ ಕವಿಕಾವ್ಯ ಸಮ್ಮೇಳನ ಹಮ್ಮಿಕೊಂಡು ಈ ಸಮ್ಮೇಳನಕ್ಕೆ ನನ್ನನ್ನು ಸರ್ವಾಧ್ಯಕ್ಷರನ್ನಾಗಿ ಮಾಡಿರುವುದು ಅತ್ಯಂತ ಖುಷಿ ಕೊಟ್ಟಿದೆ. ಎಲ್ಲಾ ಸಮ್ಮೇಳನಗಳಲ್ಲೂ ಚರ್ಚೆ, ವಿಚಾರಗೋಷ್ಠಿಗಳು ನಡೆಯುತ್ತವೆ. ಆದರೆ ಈ ಸಮ್ಮೇಳನ ಕೇವಲ ಕಾವ್ಯಕ್ಕೆ ಮಾತ್ರ ಸೀಮಿತವಾಗಿದ್ದು, ಉದ್ಘಾಟನೆ ಸೇರಿದಂತೆ ಎರಡು ಮಹತ್ವದ ರಾಜ್ಯಮಟ್ಟದ ಕವಿಗೋಷ್ಠಿಗಳು ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ. ಇಲ್ಲಿ ಕೇವಲ ಸಮಕಾಲೀನ ಕಾವ್ಯದ ಚರ್ಚೆ ನಡೆಯುತ್ತದೆ. ಇದೊಂದು ವಿಶೇಷ ಸಮ್ಮೇಳನವಾಗಿದ್ದು, ಗಂಗಾವತಿ ಹಾಗೂ ಕೊಪ್ಪಳ ಜಿಲ್ಲೆಯ ಸಾಹಿತ್ಯಾಸಕ್ತ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರ ಮುಖೇನ ಸಮ್ಮೇಳನ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಡಾ. ಪಿ. ದಿವಾಕರ ನಾರಾಯಣ, ಶಿವಮೊಗ್ಗ ಜಿಲ್ಲಾಧ್ಯಕ್ಷೆ ಡಾ. ಎಚ್.ಕೆ. ಹಸೀನಾ, ಸಾಮಾಜಿಕ ಹೋರಾಟಗಾರ್ತಿ ಹಾಗೂ ಸಾಹಿತಿ ಶೈಲಜಾ ಹಿರೇಮಠ, ತಾಲ್ಲೂಕು ಅಧ್ಯಕ್ಷ ಶರಣಪ್ಪ ತಳ್ಳಿ ಕುಪ್ಪಿಗುಡ್ಡ, ತಿಪಟೂರು ತಾಲ್ಲೂಕು ಅಧ್ಯಕ್ಷೆ ಲತಾಮಣಿ ಎಂ.ಕೆ. ತುರುವೇಕೆರೆ, ಹಿರಿಯ ಸಾಹಿತಿಗಳಾದ ನಾಗಭೂಷಣ ಅರಳಿ, ರಮೇಶ್ ಗಬ್ಬೂರು, ಶಿಕ್ಷಕ ಮಹೇಶ್, ಕು. ಖದೀರಾ ಸೇರಿ
ದಂತೆ ಹಲವರು ಉಪಸ್ಥಿತರಿದ್ದರು.