ಜಗತ್ತಿಗೆ ವಿಶ್ವಕರ್ಮರ ಪಂಚಕಸುಬುಗಳ ಕೊಡುಗೆ ಅಪಾರ: ಮೌಲಾಸಾಬ್

ಗಂಗಾವತಿ: ಒಳ್ಳೆಯ ಕೆಲಸ ಹಾಗೂ ಒಳ್ಳೆಯ ಸೇವೆಗಳನ್ನು ಮಾಡಿದರೆ ಸಮಾಜದಲ್ಲಿ ಶಾಶ್ವತವಾಗಿ ಉಳಿಯುತ್ತೇವೆ. ಎಲ್ಲರೊಂದಿಗೆ ಸೌಹಾರ್ದತೆಯಿಂದ ಇರಬೇಕು. ವಿಶ್ವಕರ್ಮ ಸಮುದಾಯವು ಪಂಚಕಸುಬುಗಳ ಮೂಲಕ ಜಗತ್ತಿಗೆ ಅಪಾರ ಕೊಡುಗೆ ನೀಡಿದೆ. ಸಮಾಜವು ಇವುಗಳನ್ನು ಜೀವಂತವಾಗಿ ಉಳಿಸಿಕೊಂಡು ಬೆಳೆಸಿಕೊಂಡು ಹೋಗಬೇಕು ಎಂದು ನಗರಸಭೆ ಅಧ್ಯಕ್ಷರಾದ ಮೌಲಾಸಾಬ್ ಹೇಳಿದರು.
ಅವರು ಜನವರಿ-೯ ಗುರುವಾಗ ಗಂಗಾವತಿ ತಾಲೂಕ ಆಡಳಿತ ಹಾಗೂ ತಾಲೂಕ ವಿಶ್ವಕರ್ಮ ಸಮಾಜ, ತಾಲೂಕ ಮಹಿಳಾ ಘಟಕ ಮತ್ತು ವಿಶ್ವಕರ್ಮ ಯುವ ಘಟಕ ಸಂಘದ ಸಹಯೋಗದಲ್ಲಿ ನಗರದ ಹೊಸಳ್ಳಿ ರಸ್ತೆಯಲ್ಲಿರುವ ಮೌನೇಶ್ವರರ ದೇವಸ್ಥಾನದಲ್ಲಿ ನಡೆದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯಲ್ಲಿ ಜಕಣಾಚಾರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿಡದರು.
ನಂತರ ಸಮಾಜದ ಜಿಲ್ಲಾ ಅಧ್ಯಕ್ಷರಾದ ನಾಗೇಶ್ ಕುಮಾರ್ ಕಂಸಾಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಮರಶಿಲ್ಪಿ ಜಕಣಾಚಾರಿ ಕೆತ್ತನೆ ಮಾಡಿದ ಶಿಲ್ಪಕಲೆಯ ದೇವಸ್ಥಾನಗಳು, ಇಂದು ಪ್ರವಾಸೋದ್ಯಮದಲ್ಲಿ ಉದ್ಯೋಗದ ಕೇಂದ್ರಗಳಾಗಿವೆ. ಆ ನಿಟ್ಟಿನಲ್ಲಿ ಐತಿಹಾಸಿಕ ದೇವಾಲಯ, ಸ್ಮಾರಕಗಳು, ಪ್ರವಾಸಿ ತಾಣಗಳ ಅಭಿವೃದ್ಧಿಗೆ ಜನಪ್ರತಿನಿಧಿಗಳು, ಸಾರ್ವಜನಿಕರು ಮತ್ತು ಅಧಿಕಾರಿಗಳು ಶ್ರಮಿಸಬೇಕು ಎಂದು ತಿಳಿಸಿದರು.
ವಿಶ್ವಕರ್ಮ ಸಮಾಜದ ಗಂಗಾವತಿ ತಾಲೂಕ ಅಧ್ಯಕ್ಷರಾದ ಕಾಳೇಶ ಬಡಿಗೇರ ಮಾತನಾಡಿ ‘ಜಗತ್ತಿನ ಐತಿಹಾಸಿಕ ದೇವಾಲಯಗಳು, ಸ್ಮಾರಕಗಳು ಹಾಗೂ ಪ್ರವಾಸಿ ತಾಣಗಳ ಬೆಳವಣಿಗೆಗೆ ಅಮರಶಿಲ್ಪಿ ಜಕಣಾಚಾರರ ಕೊಡುಗೆ ಅಪಾರವಾಗಿದೆ’. ವಿಶ್ವಕರ್ಮ ಸಮಾಜವು ಒಗ್ಗಟ್ಟಿನಿಂದ ಮುನ್ನಡೆದು, ಪಂಚ ಕಸುಬುಗಳನ್ನು ಉಳಿಸಿ ಬೆಳೆಸಬೇಕೆಂದು ಕೋರಿದರು.
ತಾಲೂಕ ಉಪದಂಡಾಧಿಕಾರಿಗಳಾದ ರವಿಕುಮಾರ ಹಾಗೂ ನಗರಸಭೆ ಸದಸ್ಯರಾದ ಎಫ್ ರಾಘವೇಂದ್ರರವರು ಮಾತನಾಡಿ, ನಮ್ಮ ದೇಶದಲ್ಲಿ ಇಂದಿಗೂ ಶಿಲ್ಪಕಲೆ ಜೀವಂತವಾಗಿದೆ ಎಂಬುದಕ್ಕೆ ಬೇಲೂರು, ಹಳೇಬೀಡು, ಸೋಮನಾಥಪುರ ಗಳಂತೆ ಐತಿಹಾಸಿಕ ಶಿಲ್ಪಗಳೇ ನಮಗೆ ಸಾಕ್ಷಿಯಾಗಿವೆ ಎಂದರು.
ಮುಂದುವರೆದು ಸಮಾಜದ ಮುಖಂಡ ಮಂಜುನಾಥ್ ಪತ್ತಾರ್ ಮಾತನಾಡಿ ಆಗಿನ ಅಮರ ಶಿಲ್ಪಿ ಜಕಣಾಚಾರಿಯಂತೆ ಈಗಿನ ಮೈಸೂರು ನಾಡಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ವಿಶ್ವಕರ್ಮ ಸಮಾಜದ ಆಸ್ತಿಯಾಗಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಶ್ವಕರ್ಮ ಸಮಾಜದ ಶಿಲ್ಪಿಗಳನ್ನು ಗುರುತಿಸಿ, ಹೆಚ್ಚಿನ ಮಟ್ಟದಲ್ಲಿ ಪ್ರೋತ್ಸಾಹ ನೀಡಬೇಕಾಗಿದೆ ಎಂದರು.
ಈ ಸಂಸ್ಮರಣಾ ದಿನಾಚರಣೆ ಅಂಗವಾಗಿ ಸಮಾಜದ ಮಹಿಳೆಯರಿಗೆ ಮತ್ತು ಮಕ್ಕಳಿಗೆ ರಂಗೋಲಿ ಸ್ಪರ್ಧೆ, ಆಶುಭಾಷಣ, ಛದ್ಮವೇಶ, ಅಗ್ನಿರಹಿತ ಅಡುಗೆ ಪದಾರ್ಥಗಳ ತಯಾರಿಕೆ ಸೇರಿದಂತೆ ಇನ್ನಿತರ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಹಾಗೆಯೇ ಸಮಾಜದ ಸ್ಥಳೀಯ ಶಿಲ್ಪಿಯಾದ ಪ್ರಶಾಂತ ಸೋನಾರ್ ಶಿಲ್ಪಿಯವರಿಗೆ ಆಡಳಿತ ಮಂಡಳಯಿಂದ ಆತ್ಮೀಯವಾಗಿ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರುಗಳಾದ ಎನ್.ಎಂ.ಪತ್ತಾರ್, ಸಿ.ವಿ ಸರ್ವಜ್ಞಾಚಾರ್, ಪ್ರಭು ಬಡಿಗೇರ್ ಕೆಸರಟ್ಟಿ, ಮೌನೇಶ್ ಆಚಾರ್, ಜೆ ಮಂಜುನಾಥ್ ಸರಾಫ್, ಸೋಮನಾಥ ವಡ್ಡರಹಟ್ಟಿ, ಮೋನಮ್ಮ ಶಿಕ್ಷಕರು ಹಾಗೂ ಸಮಾಜದ ಗುರುಹಿರಿಯರು, ಮುಖಂಡರು ಯುವ ಮಿತ್ರರು, ಮಹಿಳಾ ಮಂಡಳಿಯವರು ಉಪಸ್ಥಿತರಿದ್ದರು.

 

Leave a Reply