ವಿಭಾಗೀಯ ಮಟ್ಟದ ಸಾಂಸ್ಕೃತಿಕ ಭಾವಗೀತೆ ಸ್ಪರ್ಧೆಯಲ್ಲಿ ಗಂಗಾವತಿಯ ವೈಷ್ಣವಿ ರಾಜ್ಯಮಟ್ಟಕ್ಕೆ ಆಯ್ಕೆ

ಗಂಗಾವತಿ: ನಗರದ ಶ್ರೀಕೊಟ್ಟೂರೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ದ್ವಿತೀಯು ಪಿ.ಯು.ಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾದ ಕುಮಾರಿ ವೈಷ್ಣವಿ ಇವರು ಡಿಸೆಂಬರ್-೨ ರಂದು ಬಸವಕಲ್ಯಾಣದಲ್ಲಿ ನಡೆದ ವಿಭಾಗೀಯ ಮಟ್ಟದ ಪದವಿಪೂರ್ವ ಕಾಲೇಜುಗಳ ಸಾಂಸ್ಕೃತಿಕ ಭಾವಗೀತೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ.

ಈ ವಿದ್ಯಾರ್ಥಿನಿಗೆ ಸಂಘದ ಅಧ್ಯಕ್ಷರಾದ ಶ್ರೀ ಮ.ನಿ.ಪ್ರ ಡಾ. ಕೊಟ್ಟೂರು ಮಹಾಸ್ವಾಮಿಗಳು ಕಲ್ಮಠ ಹಾಗೂ ಕಾರ್ಯದರ್ಶಿಗಳಾದ ಶ್ರೀ ಶರಣೇಗೌಡ ಮಾಲಿಪಾಟೀಲ್ ಹಾಗೂ ಸಂಘದ ಸರ್ವ ಸದಸ್ಯರು, ಕಾಲೇಜಿನ ಪ್ರಾಚಾರ್ಯರಾದ ಚಂದ್ರಶೇಖರ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ. https://aratt.ai/@vishwaroopa_news_blog

ಯಶಸ್ವಿಯಾಗಿ ನಡೆದ ವಿಶ್ವ ವಿಕಲಚೇತನರ ದಿನಾಚರಣೆ

ಗಂಗಾವತಿ: ಡಿಸೆಂಬರ್-೩ ಬುಧವಾರ ವಿಶ್ವವಿಕಲಚೇತನರ ದಿನಾಚರಣೆಯನ್ನು ಜಿಲ್ಲಾ ಕೇಂದ್ರವಾದ ಕೊಪ್ಪಳದಲ್ಲಿ ಜಿಲ್ಲೆಯ ಸಂಘ ಸಂಸ್ಥೆಗಳು ಹಾಗೂ ಸರ್ಕಾರದ ಸಂಯುಕ್ತಾಶ್ರಯದಲ್ಲಿ ತಾಲೂಕಾ ಕ್ರೀಡಾಂಗಣದಲ್ಲಿ ನಡೆಯಿತು.

ವಿಶ್ವವಿಕಲಚೇತನರ ದಿನಾಚರಣೆ ನಿಮಿತ್ಯ ವಿವಿಧ ಕ್ರೀಡಾ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಸದರಿ ಸ್ಪರ್ಧೆಗಳಲ್ಲಿ ಲಯನ್ಸ್ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯ ೩೦ ವಿದ್ಯಾರ್ಥಿಗಳು ಭಾಗವಹಿಸಿ, ಕಿರಿಯರು ಹಾಗೂ ಹಿರಿಯರ ವಿಭಾಗ (೮-೧೧, ೧೨-೧೫ ಮತ್ತು ೧೬ ರಿಂದ ೨೧ ವರ್ಷ ಹಾಗೂ ೨೧ ವರ್ಷ ಮೇಲ್ಪಟ್ಟವರ ಕ್ರೀಡಾ ಸ್ಪರ್ಧೆಗಳಲಾದ ೨೫ ಮಿ, ೫೦ ಮಿ, ಮತ್ತು ೧೦೦ ಮಿ. ಓಟ, ಬಕೆಟ್‌ನಲ್ಲಿ ಚಂಡು ಹಾಕುವುದು, ಸಾಫ್ಟ್ ಬಾಲ್ ಥ್ರೋ, ಹಾಗೂ ಗುಂಡು ಎಸೆತಗಳಲ್ಲಿ ೧೦ ಪ್ರಥಮ ಹಾಗೂ ೧೦ ದ್ವಿತಿಯ ಬಹುಮಾನ ಪಡೆದು ಸಂಸ್ಥೆ ಹಾಗೂ ಶಾಲೆಗೆ ಕೀರ್ತಿ ತಂದಿದ್ದಾರೆ.

ಲಯನ್ಸ್ ಬುದ್ದಿಮಾಂದ್ಯ ಮಕ್ಕಳ ವಸತಿ ಶಾಲಾ ಮುಖ್ಯಗುರುಗಳಾದ ಪ್ರಭು ಹಿರೇಮಠ, ಶಾಲಾ ಶಿಕ್ಷಕರು ಮತ್ತು ಶಿಕ್ಷಕೇತರರು ಕ್ರೀಡಾ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ವಿಕಲಚೇತನರು ಹಾಗೂ ಶಾಲಾ ಸಿಬ್ಬಂದಿ ಎಲ್ಲರ ಸಹಕಾರದಿಂದ ವಿಶ್ವ ವಿಕಲಚೇತನರ ದಿನಾಚರಣೆ ಯಶಸ್ವಿಯಾಗಿದ್ದು, ಲಯನ್ಸ್ ಸಂಸ್ಥೆಯ ಅಧ್ಯಕ್ಷರಾ ಡಾ|| ಜಿ.ಚಂದ್ರಪ್ಪರವರು ಹರ್ಷ ವ್ಯಕ್ತಪಡಿಸಿದ್ದಾರೆ. https://aratt.ai/@vishwaroopa_news_blog

ಗುಂಜಹಳ್ಳಿ ಹಿರೇನಾಗಪ್ಪ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಎ.ಐ ತಂತ್ರಜ್ಞಾನ ಕುರಿತು ವಿಶೇಷ ಉಪನ್ಯಾಸ

ಗಂಗಾವತಿ: ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ದಕ ಸಂಘದ ಗುಂಜಹಳ್ಳಿ ಹಿರೇನಾಗಪ್ಪ ವಾಣಿಜ್ಯ ಮಹಾವಿದ್ಯಾಲಯದಲ್ಲಿ ನವೆಂಬರ್-೨೨ ರಂದು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ AI ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘ (ರಿ) ದ ಶಾಶ್ವತ ಅಧ್ಯಕ್ಷರಾದ ಶ್ರೀ ಮ.ನಿ.ಪ್ರ. ಡಾ. ಕೊಟ್ಟೂರು ಮಹಾಸ್ವಾಮಿಗಳು ಉದ್ಘಾಟಿಸಿದರು. ಸ್ವಾಮೀಜಿಗಳು ವಿದ್ಯಾರ್ಥಿಗಳ ನೈತಿಕತೆ, ಶಿಸ್ತಿನ ಮಹತ್ವ ಮತ್ತು ಗುಣಮಟ್ಟಾಧಾರಿತ ಶಿಕ್ಷಣದ ಅಗತ್ಯತೆಯ ಬಗ್ಗೆ ತಮ್ಮ ಆಶಯ ಭರಿತ ಆಶೀರ್ವಚನವನ್ನು ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶರಣಬಸವಯ್ಯ ವಹಿಸಿ, ವಿದ್ಯಾರ್ಥಿಗಳಿಗೆ ಕಾರ್ಯಕ್ರಮದ ಪ್ರಾಮುಖ್ಯತೆಯನ್ನು ತಿಳಿಸಿ, AI  ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಳ್ಳುವಂತೆ ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಕಾರ್ಯದರ್ಶಿಗಳಾದ ಶರಣೆಗೌಡ ಜಿ. ಮಾಲಿಪಾಟೀಲ್ ಭಾಗವಹಿಸಿ ವಿದ್ಯಾರ್ಥಿಗಳು ಹೊಸ ಯುಗದಲ್ಲಿ ಸ್ಪರ್ಧಾತ್ಮಕ ಕೌಶಲ್ಯಗಳನ್ನು ಹೊಂದಬೇಕೆಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಗಂಗಾವತಿಯ ಎಂ.ಡಿ. ನಾಸಿರುದ್ದೀನ್ ಭಾಗವಹಿಸಿ, ಶಿಕ್ಷಣದಲ್ಲಿ ಗುಣಮಟ್ಟದ ಭೂಮಿಕೆ, ಹೊಸ ಶೈಕ್ಷಣಿಕ ಅವಶ್ಯಕತೆಗಳು, ವಾಣಿಜ್ಯದಲ್ಲಿ ಎ.ಐ ತಂತ್ರಜ್ಞಾನದ ಕುರಿತು ಮತ್ತು ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದ ಕುರಿತು ಉಪಯುಕ್ತ ಹಾಗೂ ಪ್ರೇರಣದಾಯಕ ಉಪನ್ಯಾಸವನ್ನು ನೀಡಿದರು.

ಐ.ಕ್ಯೂ.ಎ.ಸಿ ಸಂಯೋಜಕರು ಹಾಗೂ ವಾಣಿಜ್ಯಶಾಸ್ತçದ ಉಪನ್ಯಾಸಕರಾದ ದಾದಾ ಕಲಂದರ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಯೋಜಿಸಿದರು.
ಇದೇ ಸಂದರ್ಭದಲ್ಲಿ ಎಂಕಾಂ ವಿಭಾಗದ ಸಂಯೋಜಕರು ಹಾಗೂ ಹಿರಿಯ ಉಪನ್ಯಾಸಕರಾದ ಸೋಮನಗೌಡ ಎಸ್.ಕೆ. ಅವರು ತಮ್ಮ ಮಾತಿನಲ್ಲಿ ವಿಭಾಗದ ಚಟುವಟಿಕೆಗಳ ಬಗ್ಗೆ ವಿವರಿಸಿದರು.

ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಜಯಲಕ್ಷ್ಮೀ ಅವರು ಕಾರ್ಯಕ್ರಮದ ಮಹತ್ವವನ್ನು ವಿವರಿಸಿ, ವಿದ್ಯಾರ್ಥಿಗಳ ಸಕ್ರಿಯ ಭಾಗವಹಿಸುವಿಕೆಯನ್ನು ಶ್ಲಾಘಿಸಿದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ವರ್ಗ, ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. https://aratt.ai/@vishwaroopa_news_blog

ನಿರ್ಮಲ ತುಂಗಭದ್ರಾ ಅಭಿಯಾನದ ೩ನೇ ಹಂತದ ಪಾದಯಾತ್ರೆಯ ಕರಪತ್ರ, ಪೋಸ್ಟರ್ ಮತ್ತು ಬಟ್ಟೆ ಬ್ಯಾನರ್‌ಗಳ ಅನಾವರಣ ಕಾರ್ಯಕ್ರಮ.

ಗಂಗಾವತಿ: ಆನೆಗುಂದಿಯ ನವಬೃಂದಾವನದಲ್ಲಿ ನವೆಂಬರ್-೧೮ ರಂದು ಶ್ರೀ ಪದ್ಮನಾಭತೀರ್ಥರ ಆರಾಧನಾ ಮಹೋತ್ಸವದ ಸಮಾರಂಭದಲ್ಲಿ ಮಂತ್ರಾಲಯ ಮಠದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಸುಬುಧೇಂದ್ರತೀರ್ಥರು ಹಾಗೂ ಆರ್ಯ ಅಕ್ಷೋಭ್ಯತೀರ್ಥ ಸಂಸ್ಥಾನ ಬಾಳಗಾರು ಮಠದ ಪೀಠಾಧಿಪತಿಗಳಾದ ಶ್ರೀಅಕ್ಷೋಭ್ಯ ರಾಮಪ್ರಿಯ ತೀರ್ಥರು ಮತ್ತು ಮುಳಬಾಗಿಲು ಶ್ರೀಪಾದರಾಜಮಠದ ಪೀಠಾಧಿಪತಿಗಳಾದ ಶ್ರೀ ಸುಜಯನಿಧಿತೀರ್ಥರು ಅಮೃತ ಹಸ್ತದಿಂದ ಡಿಸೆಂಬರ್‌ನಲ್ಲಿ ಕಿಷ್ಕಿಂದೆಯಿಂದ ಮಂತ್ರಾಲಯದವರೆಗೆ ನಡೆಯುವ ೩ನೇ ಹಂತದ ನಿರ್ಮಲ ತುಂಗಭದ್ರ ಅಭಿಯಾನದ ಜಲ ಜಾಗೃತಿ ಮತ್ತು ಜನ ಜಾಗೃತಿ ಪಾದಯಾತ್ರೆಯ ಕರಪತ್ರ, ಪೋಸ್ಟರ್ ಮತ್ತು ಬಟ್ಟೆ ಬ್ಯಾನರ್‌ಗಳನ್ನು ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಮಂತ್ರಾಲಯ ಶ್ರೀಗಳು “ನಿರ್ಮಲ ತುಂಗಭದ್ರಾ ಅಭಿಯಾನ ಅತ್ಯಂತ ಉಪಯುಕ್ತ ಮತ್ತು ಮಹತ್ತರ ಕಾರ್ಯ. ಜಲಜಾಗೃತಿಯ ಈ ಪಾದಯಾತ್ರೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ. ಎಲ್ಲರೂ ಪಾದಯಾತ್ರೆಯಲ್ಲಿ ಪಾಲ್ಗೊಂಡು ನದಿಗಳ ಉಳಿವಿಗೆ ಶ್ರಮಿಸಬೇಕು” ಎಂದರು.
ಮೂರು ಜನ ಪೀಠಾಧಿಪತಿಗಳಿಂದ ಪುಣ್ಯಕ್ಷೇತ್ರ ನವ ಬೃಂದಾವನದಲ್ಲಿ ಪಾದಯಾತ್ರೆಯ ಕರಪತ್ರ, ಪೋಸ್ಟರ್‌ಗಳನ್ನು ಬಿಡುಗಡೆಯಾಗಿದ್ದಕ್ಕೆ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ಬಸವರಾಜ ಪಾಟೀಲ್ ವೀರಾಪೂರ್, ಪ್ರಮುಖರಾದ ಮಾಧವನ್ ಬೆಂಗಳೂರು, ಬಾಲಕೃಷ್ಣ ನಾಯ್ಡು, ಲೋಕೇಶ್ವರಪ್ಪ ಶಿವಮೊಗ್ಗ, ಶ್ರೀಮತಿ ಲಲಿತಾರಾಣಿ ಶ್ರೀರಂಗದೇವರಾಯಲು, ಸಂತೋಷ ಕೆಲೋಜಿ, ಗುಂಡೂರು ಪವನಕುಮಾರ್ ಹಾಗೂ ಸಂಚಾಲಕರಾದ ಡಾ|| ಶಿವಕುಮಾರ್ ಮಾಲಿಪಾಟೀಲ, ವಿಷು ತೀರ್ಥ ಜೋಶಿ, ನಾಗರಾಜ ಎಸ್. ಗುತ್ತೇದಾರ ವಕೀಲರು, ಮಂಜುನಾಥ, ಜಗನ್ನಾಥ್ ಅಲ್ಲಂಪಲ್ಲಿ, ಸರ್ವೇಶ ವಸ್ತ್ರದ್ ಶಿರಿಗೇರಿ, ಮಂಜುನಾಥ ಕಟ್ಟಿಮನಿ, ಅರ್ಜನ್ ಆರ್, ರಾಘವೇಂದ್ರ ತೂನಾ, ಅಲೆಮಾರಿ ಕೃಷ್ಣ ಇತರರು ಸಂತಸ ವ್ಯಕ್ತಪಡಿಸಿದ್ದಾರೆ. https://aratt.ai/@vishwaroopa_news_blog

ಶ್ರೀ ಶಾರದಾ ದೇವಿಗೆ ಕಾರ್ತಿಕ ಮಾಸದ ದೀಪೋತ್ಸವ. ಮನದ ಅಂದಕಾರ ತೆಗೆದು ಹಾಕುವಲ್ಲಿ ಕಾರ್ತಿಕ ದೀಪೋತ್ಸವ ಪೂರಕ: ನಾರಾಯಣರಾವ್ ವೈದ್ಯ.

ಗಂಗಾವತಿ: ಮನದ ಅಂಧಕಾರವನ್ನು ತೊಡೆದುಹಾಕುವಲ್ಲಿ ಕಾರ್ತಿಕ ದೀಪೋತ್ಸವ ಅತ್ಯಂತ ಮಹತ್ವದಾಯಕವಾಗಿದೆ ಎಂದು ಶಂಕರ ಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ ಹೇಳಿದರು.

ಅವರು ಶುಕ್ರವಾರದಂದು ಶ್ರೀ ಶಾರದಾಂಬ ದೇಗುಲದಲ್ಲಿ ಕಾರ್ತಿಕ ದೀಪೋತ್ಸವ ಸಂಭ್ರಮವನ್ನು ಉದ್ದೇಶಿಸಿ ಮಾತನಾಡಿದರು. ಕತ್ತಲು ಎಂಬುವುದು ಅಜ್ಞಾನದ ಸಂಕೇತವಾಗಿತ್ತು. ಅಂತಹ ಅಜ್ಞಾನವನ್ನು ದೀಪ ಹಚ್ಚುವುದರ ಮೂಲಕ ಬೆಳಕು ನೀಡುವ ಕಾರ್ಯ ಕಾರ್ತಿಕೋತ್ಸವದ ಉದ್ದೇಶವಾಗಿದೆ. ಕಳೆದ ೮ ವರ್ಷಗಳಿಂದ ಶೃಂಗೇರಿಯ ಉಭಯ ಜಗದ್ಗುರುಗಳ ಅನುಗ್ರಹದ ಮೇರೆಗೆ ವಿವಿಧ ಸಮಾಜದ ಹಾಗೂ ವಿವಿಧ ಭಜನಾ ಮಂಡಳಿಗಳ ಮಹಿಳೆಯರಿಂದ ಶಂಕರ ಮಠದಲ್ಲಿ ಅರ್ಥಪೂರ್ಣವಾಗಿ ಆಚರಿಸುತ್ತ ಬರಲಾಗಿದೆ. ಪ್ರಸ್ತುತ ದಿನಗಳಲ್ಲಿ ಜೀವನದ ಮೌಲ್ಯ ಕುಸಿಯುತ್ತಿದೆ, ಪ್ರೀತಿ ವಿಶ್ವಾಸ, ನಾವು ನಮ್ಮವರು ಎಂಬ ಭಾವನೆ ಬೆಳೆಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಧಾರ್ಮಿಕ ಆಚರಣೆಯ ಮೂಲಕ, ಗುಣಮಟ್ಟದ ಸಂಸ್ಕಾರ ಬೆಳೆಸಿಕೊಳ್ಳುವುದರ ಮೂಲಕ ಭಾರತದ ಭವ್ಯ ಪರಂಪರೆ ಸಂಸ್ಕೃತಿ ಉಳಿಸಬೇಕಾದ ಅವಶ್ಯಕತೆ ಇದೆ ಎಂದು ತಿಳಿಸಿದರು.

ಧಾರ್ಮಿಕ ಸಮಾರಂಭದ ನೇತೃತ್ವವನ್ನು ವಹಿಸಿದ ಭೀಮಭಟ್ ಬಸಾಪಟ್ಟಣ ಮಾತನಾಡಿ ಕಾರ್ತಿಕ ಮಾಸದ ದೀಪೋತ್ಸವಕ್ಕೆ ಸಂಪ್ರದಾಯ ಸೇರಿದಂತೆ ವೈಜ್ಞಾನಿಕ ಹಿನ್ನೆಲೆ ಇದೆ. ಕಾರ್ತಿಕ ಮಾಸ ಕತ್ತಲೆಯಿಂದ ಕೂಡಿದ್ದು ಪ್ರಕೃತಿ ದತ್ತವಾದ ಚಳಿ ಹೊಂದಿದೆ. ಮನುಷ್ಯನಲ್ಲಿ ಇರುವ ಅಜ್ಞಾನ ಅಂಧಕಾರವನ್ನು ಹೊಡೆದೋಡಿಸಿ ಸುಜ್ಞಾನದ ಬೆಳಕನ್ನು ಶ್ರೀ ಶಾರದಾಂಬೆ ದೇವಿಗೆ ಸಮರ್ಪಿಸುವ ಸಂಕಲ್ಪ ಹೊಂದಲಾಗಿದೆ ಎಂದು ಆಚರಣೆಯ ಸಮಗ್ರ ಮಾಹಿತಿಯನ್ನು ಹೇಳಿದರು.

ಈ ಸಂದರ್ಭದಲ್ಲಿ ರಾಘವೇಂದ್ರ ಅಳವಂಡಿಕರ್ ದಂಪತಿಗಳು ಸೇರಿದಂತೆ ಶಾರದಾ ಶಂಕರ ಭಕ್ತ ಮಂಡಳಿ, ಇತರರು ಏಕಕಾಲಕ್ಕೆ ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು. ಮಹಾಸಂಕಲ್ಪ ಭಜನೆ ಮಹಾ ಮಂಗಳಾರತಿ, ಮತ್ತಿತರ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು.

ಈ ಸಂದರ್ಭದಲ್ಲಿ ಭೀಮಶಂಕರ್ ಹೊಸಳ್ಳಿ, ಶೇಷಗಿರಿ ಗಡಾದ್, ವೇಣುಗೋಪಾಲ್ ಶ್ರೀಧರ್, ನಾಗೇಶ್ ಸೇರಿದಂತೆ ವಿವಿಧ ಸಮಾಜದ ಮುಖಂಡರು ಯುವಕರು ಮಹಿಳೆಯರು ಮಕ್ಕಳು ದೀಪೋತ್ಸವ ಬೆಳಗಿ ಸಂಭ್ರಮಿಸಿದರು. https://aratt.ai/@vishwaroopa_news_blog

ಗಂಗಾವತಿಯ ಕಲ್ಯಾಣಂ ನಾಗರಾಜ್ ಅವರಿಗೆ ಸಂತ ಶ್ರೀ ಕನಕದಾಸರ ಕಾವ್ಯರತ್ನ ರಾಷ್ಟ್ರೀಯ ಪ್ರಶಸ್ತಿ ಹಾಗೂ ಧಾರವಾಡ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

ಗಂಗಾವತಿ: ಗದುಗಿನ ಡಾ. ವ್ಹಿ.ಬಿ ಹಿರೇಮಠ ಮೆಮೋರಿಯಲ್ ಪ್ರತಿಷ್ಠಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅಶ್ವಿನಿ ಪ್ರಕಾಶನ ಗದಗ ಇವರ ಸಹಯೋಗದಲ್ಲಿ ನವೆಂಬರ್-೦೨ ರಂದು ಗದುಗಿನ ಕೆ.ಎಸ್.ಎಸ್ ಮಹಾವಿದ್ಯಾಲಯದ ಆವರಣದಲ್ಲಿ ನಡೆದ ೭೦ನೇ ಕನ್ನಡ ರಾಜ್ಯೋತ್ಸವ ಹಾಗೂ ಡಾ. ವ್ಹಿ.ಬಿ ಹಿರೇಮಠರ ೧೩ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯ ವಹಿಸಿದ್ದ ದೊರೆಸ್ವಾಮಿ ವಿರಕ್ತಮಠ ಭೈರನಹಟ್ಟಿಯ ಶಾಂತಲಿಂಗ ಮಹಾಸ್ವಾಮಿಗಳು ಹಾಗೂ ವಿಶ್ವನಾಥ ಮಹಾಸ್ವಾಮಿಗಳ ಮತ್ತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ವ್ಹಿ.ಬಿ ಹಿರೇಮಠ ಅವರುಗಳ ಅಭಯ ಹಸ್ತದಿಂದ ಗಂಗಾವತಿಯ ಹಗಲುವೇಷ ಕಲಾವಿದ ಕಲ್ಯಾಣಂ ನಾಗರಾಜ ಅವರಿಗೆ ಸಂತ ಶ್ರೀ ಕನಕದಾಸರ ಕಾವ್ಯರತ್ನ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಅದೇರೀತಿ ನವೆಂಬರ್-೯ ರಂದು ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತುವತಿಯಿಂದ ಹಮ್ಮಿಕೊಂಡ ಕನ್ನಡಿಗರ ಕನ್ನಡ ರಾಜ್ಯೋತ್ಸವ ಹಾಗೂ ಕನಕೋತ್ಸವ ಕಾರ್ಯಕ್ರಮದಲ್ಲಿಯೂ ಧಾರವಾಡ ಜಿಲ್ಲಾ ಕಸಾಪ ಅಧ್ಯಕ್ಷರಾದ ಡಾ. ಲಿಂಗರಾಜ ಅಂಗಡಿ, ಬೆಳಗಾವಿಯ ಹಿರಿಯ ನ್ಯಾಯವಾದಿಗಗಳಾದ ಬಸವರಾಜ ಸಿ. ಯರಗಣವಿ, ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಅಕ್ಷರದೀಪ ಫೌಂಡೇಷನ್ ಅಧ್ಯಕ್ಷರಾದ ಪ್ರವೀಣಕುಮಾರ ಕನ್ಯಾಳ, ಶಿಕ್ಷಕರು ಹಾಗೂ ಸಾಹಿತಿಗಳಾದ ಗಣಪತಿ ಹೆಗಡೆ ಅವರುಗಳ ಅಮೃತ ಹಸ್ತದಿಂದ ಕಲ್ಯಾಣಂ ನಾಗರಾಜ್ ಅವರಿಗೆ ಧಾರವಾಡ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಹೀಗೆ ಹುಟ್ಟಿಂದಿನಿಂದಲೇ ಹಗಲುವೇಷ ಕಲೆಯನ್ನು ರೂಢಿಸಿಕೊಂಡು ಬಂದ ಕಲ್ಯಾಣಂ ನಾಗರಾಜ ಅವರು ಹಗಲುವೇಷ ಧರಿಸಿ ಸರ್ಕಾರದ ವಿವಿಧ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ರಾಮಾಯಣ ಮತ್ತು ಮಹಾಭಾರತಗಳಲ್ಲಿ ಬರುವ ಸುಮಾರು ೩೨ ಪಾತ್ರಧಾರಿ ವೇಷಗಳನ್ನು ಧರಿಸಿ ಅಭಿನಯಿಸುವುದರೊಂದಿಗೆ ಹಾರ್ಮೋನಿಯಂ, ತಬಲಾ ನುಡಿಸುವುದು ಸೇರಿದಂತೆ ಗಾಯನದೊಂದಿಗೆ ತಮ್ಮ ಕಲೆಯನ್ನು ಕನ್ನಡ ನಾಡಿನಲ್ಲಿ ಮಾತ್ರವಲ್ಲದೆ ಬೇರೆ ರಾಜ್ಯಗಳಲ್ಲಿಯೂ ಪ್ರದರ್ಶಿಸಿ ಜನಮನ್ನಣೆ ಗಳಿಸಿದ್ದು, ಸರ್ಕಾರದಿಂದ ಹಾಗೂ ಸರ್ಕಾರೇತರ ಸಂಸ್ಥೆಗಳಿ೦ದ ಸಾಕಷ್ಟು ಪ್ರಶಸ್ತಿ ಹಾಗೂ ಸನ್ಮಾನಗಳನ್ನು ಪಡೆದಿರುತ್ತಾರೆ.

ಇಂತಹ ಬಹುಮುಖಿ ಪ್ರತಿಭೆ ಹೊಂದಿದ ಕಲಾವಿದರಿಗೆ ಕರ್ನಾಟಕ ಸರ್ಕಾರ ಇದುವರೆಗೂ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದಿಲ್ಲ. ಮುಂದಿನ ದಿನಗಳಲ್ಲಿಯಾದರೂ ಸರ್ಕಾರ ಇವರ ಪ್ರತಿಭೆಯನ್ನು ಗುರುತಿಸಿ ಉನ್ನತ ಪ್ರಶಸ್ತಿಗಳನ್ನು ನೀಡಿ ಗೌರವಿಸಿ ಪ್ರೋತ್ಸಾಹಿಸಬೇಕಿದೆ.

https://aratt.ai/@vishwaroopa_news_blog

ಗಂಗಾವತಿ ನಗರದಲ್ಲಿ ಹಾನಗಲ್ಲ ಶ್ರೀ ಕುಮಾರೇಶ್ವರ ಭಜನಾ ಮಂಡಳಿ ಸ್ಥಾಪನೆಗಗಾಗಿ ನವೆಂಬರ್-೮ ರಂದು ಪೂರ್ವಸಿದ್ಧತಾ ಸಭೆ.

ಗಂಗಾವತಿ: ನವೆಂಬರ್-೮ ಶನಿವಾರ ಸಂಜೆ ೫:೦೦ ಗಂಟೆಗೆ ನಡೆದ ಹಾನಗಲ್ಲ ಶ್ರೀ ಗುರು ಕುಮಾರೇಶ್ವರ ಭಜನಾ ಮಂಡಳಿಯ ಪೂರ್ವಭಾವಿ ಸಭೆ ಯಶಸ್ವಿಯಾಗಿ ಜರುಗಿತು ಎಂದು ಪರಮ ಪೂಜ್ಯ ಶ್ರೀ ಶರಣಬಸವ ದೇವರು ಪ್ರಕಟಣೆಯಲ್ಲಿ ತಿಳಿಸಿದರು.

ಪೂರ್ವಭಾವಿ ಸಭೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ಮಹಿಳೆಯರಿ ಗೋಸ್ಕರ ವಿಶೇಷವಾಗಿ ಈ ಒಂದು ವೇದಿಕೆ ಸ್ಥಾಪನೆಯಾಗಿದ್ದು ಅದಕ್ಕಾಗಿ ಗಂಗಾವತಿಯ ಎಲ್ಲಾ ಮಹಿಳೆಯರು ಆಧ್ಯಾತ್ಮಿಕವಾಗಿ ಈ ಒಂದು ಭಜನಾ ಮಂಡಳಿಯನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಆಶೀರ್ವಾದ ರೂಪವಾಗಿ ಹೇಳಿದರು.

ದೆಹಲಿಯಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀ ಕುಮಾರ ಶಿವಯೋಗಿ ಸೇವಾ ಸಮಿತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀಯುತ ಶ್ರೀಕಂಠ ಚೌಕಿಮಠ ಇವರು ಅಂತರ್ಜಾಲದ ಮೂಲಕ ಭಜನಾ ಮಂಡಳಿಯ ಸ್ಥಾಪನೆಯ ಎಲ್ಲಾ ನಿಯಮಾವಳಿಗಳ ಬಗ್ಗೆ ಸವಿಸ್ತಾರವಾಗಿ ನಿರೂಪಿಸಿದರು.

ಉಪನ್ಯಾಸಕಿಯಾದ ಶ್ರೀಮತಿ ಅರ್ಚನಾ ಹಿರೇಮಠ ಇವರು ಪ್ರಸ್ತುತ ದಿನಮಾನಗಳಲ್ಲಿ ಮಹಿಳೆಯರು ಧಾರವಾಹಿಗಳಿಗೆ ಅವಲಂಬನೆಯಾಗಿದ್ದು ಅದಕ್ಕಾಗಿ ಆಧ್ಯಾತ್ಮಿಕವಾಗಿ ಹೊರಬರಲು ಈ ಒಂದು ವೇದಿಕೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಮಾಜಿ ಕಾಡಾ ಅಧ್ಯಕ್ಷರಾದ ಶ್ರೀಯುತ ತಿಪ್ಪೇರುದ್ರ ಸ್ವಾಮಿರವರು ಮಹಿಳೆಯರು ಈ ಒಂದು ಭಜನಾ ಮಂಡಳಿಯನ್ನು ಮುನ್ನಡೆಸಿಕೊಂಡು ಹೋಗಲು ಹಾಗೂ ಮುಂದಿನ ದಿನಮಾನಗಳಲ್ಲಿ ಎಲ್ಲಾ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಆಧ್ಯಾತ್ಮಿಕವಾಗಿ ಈ ಒಂದು ಭಜನಾ ಮಂಡಳಿಯ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂದು ಸಲಹೆ ನೀಡಿದರು. https://aratt.ai/@vishwaroopa_news_blog

ಲೇಖಿಕಾ ಸಾಹಿತ್ಯ ವೇದಿಕೆ ವತಿಯಿಂದ ಲೇಖಕಾ ಶ್ರೀ ಪ್ರಶಸ್ತಿ ಪ್ರಧಾನ

ಬೆಂಗಳೂರು: ಬೆಂಗಳೂರಿನ ಲೇಖಿಕಾ ಸಾಹಿತ್ಯಗೆ 25 ವರ್ಷ ತುಂಬಿದ ಪ್ರಯುಕ್ತ ವೇದಿಕೆಯು ತನ್ನ 25ನೇ ವಾರ್ಷಿಕೊತ್ಸವ ರಜತ ಮಹೋತ್ಸವ ಲೇಖಿಕಾ ಸಾಹಿತ್ಯ ಸಂಭ್ರಮದ ಅಂಗವಾಗಿ 25 ಸಾಹಿತ್ಯ ಕ್ಷೇತ್ರದ ಸಾಧಕ ಲೇಖಕ ಲೇಖಕಿಯರಿಗೆ ದಿನಾಂಕ 9- 11-2025ರ ಭಾನುವಾರ ಹಾಸನದ ಎ.ವಿ.ಕಾಂತಮ್ಮ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಲೇಖಿಕಾ ಶ್ರಿ 2025 ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಹಾಸನದ ಸಾಹಿತಿ ಗೊರೂರು ಅನಂತರಾಜು, ಎನ್.ಎಲ್. ಚನ್ನೇಗೌಡ, ಉದಯರವಿ, ಲೀಲಾವತಿ, ಸುಕನ್ಯ ಮುಕುಂದ, ಸುಮಾ ವೀಣಾ, ಪ್ರಭಾ ದಿನಮಣಿ, ಧಾರವಾಡದ ದಮಯಂತಿ ನರೇಗಲ್, ವಿದ್ಯಾ ಶಿರಹಟ್ಟಿ, ರೂಪಾ ಜೋಶಿ, ಮೈಸೂರಿನ ಡಾ. ಕರುಣಾ ಲಕ್ಷ್ಮಿ, ಗಣೇಶ ಅಮೀನಗಡ ಕೆ.ಎಂ.ಲೋಲಾಕ್ಷಿ, ಪದ್ಮಾ ಆನಂದ್, ಉಷಾ ನರಸಿಂಹನ್, ಬೆಂಗಳೂರಿನ ನಾಗವೇಣಿ ರಂಗನ್, ಮುಕುಂದ ಗಂಗೂರ್, ಯಶೋದಾ ಡಿ. ರಾಧಾ ಟೇಕಲ್, ಬೆಳಗಾವಿಯ ಮಧುರಾ ಕರ್ಣಂ, ದೀಪಿಕಾ ಚಾಟೆ, ಚಿಕ್ಕಮಗಳೂರಿನ ನಾಗಲಕ್ಷ್ಮಿ ಎಂ.ಜೆ., ಉತ್ತರ ಕನ್ನಡದ ಭಾಗೀರಥಿ ಹೆಗಡೆ, ಡಾ. ವೀಣಾ ಸುಳ್ಯ, ಕೃಷ್ಣ ಪದಕಿ ರವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರು ಡಾ. ಸೀ.ಚ. ಯತೀಶ್ವರ, ಸಂಚಾಲಕಿ ಶೈಲಜಾ ಸುರೇಶ್, ಪತ್ರಕರ್ತರು ವೆಂಕಟೇಶ್, ಡಾ.ವಿಜಯ, ಡಾ.ಸಾವಿತ್ರಿ, ಉಮಾಶಂಕರ್, ಡಾ. ಹೇಮಾ ಪಟ್ಟಣಶೆಟ್ಟಿ ಮೊದಲಾದವರು ಇದ್ದರು. https://aratt.ai/@vishwaroopa_news_blog

ನವೆಂಬರ್-೮ ರಂದು ಗಂಗಾವತಿಯಲ್ಲಿ ಸ್ಥಳೀಯ ಹವ್ಯಾಸಿ ಕಲಾವಿದರಿಂದ ಸಂಗೀತ ಸಂಭ್ರಮ, ಕರ್ನಾಟಕ ರಾಜ್ಯೋತ್ಸವ ಹಾಗೂ ಡಾ. ಪುನೀತ್ ರಾಜಕುಮಾರ್ ಪುಣ್ಯಸ್ಮರಣೆ

ಗಂಗಾವತಿ: ನಗರದ ಶ್ರೀ ಮಾತಾ ಕರೋಕೆ ಸ್ಟುಡಿಯೋ ಹಾಗೂ ಸಪ್ತಸ್ವರ ಸಾಂಸ್ಕೃತಿಕ ಕಲಾ ಬಳಗ ಇವರಿಂದ ನವೆಂಬರ್-೮ ಶನಿವಾರ ಸಂಜೆ ೫:೩೦ಕ್ಕೆ ಗಂಗಾವತಿಯ ಕೋರ್ಟ್ ಮುಂಭಾಗದ ಕೊಟ್ಟೂರು ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸ್ಥಳೀಯ ಹವ್ಯಾಸಿ ಕಲಾವಿದರಿಂದ ಸಂಗೀತ ಸಂಭ್ರಮ, ಕರ್ನಾಟಕ ರಾಜ್ಯೋತ್ಸವ ಹಾಗೂ ಡಾ. ಪುನೀತ್ ರಾಜಕುಮಾರ ಪುಣ್ಯಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ನಗರಸಭೆ ಸದಸ್ಯರಾದ ಆರ್. ಕಣ್ಣನ್ ಪ್ರಕಟಣೆಯಲ್ಲಿ ತಿಳಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಣಿಜ್ಯೋಧ್ಯಮಿಗಳಾದ ಶಿವಪ್ಪ ಗಾಳಿ ವಹಿಸಲಿದ್ದು, ಡಿ.ವೈ.ಎಸ್.ಪಿ ಆದ ಜಯಪ್ಪ ಎಸ್. ನ್ಯಾಮಗೌಡ್ರು ಜ್ಯೋತಿ ಬೆಳಗಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಗರಸಭೆ ಪೌರಾಯುಕ್ತರು, ನಗರಸಭೆ ಸದಸ್ಯರುಗಳು, ಗುತ್ತಿಗೆದಾರರು ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು, ಸಂಗೀತಾಸಕ್ತರು, ಪತ್ರಿಕಾ ಹಾಗೂ ದೃಶ್ಯ ಮಾಧ್ಯಮಗಳ ಪತ್ರಕರ್ತರು, ವರದಿಗಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೋರಿದ್ದಾರೆ. https://aratt.ai/@vishwaroopa_news_blog

 

ಗಂಗಾವತಿ ನಗರದಲ್ಲಿ ಹಾನಗಲ್ಲ ಶ್ರೀ ಕುಮಾರೇಶ್ವರ ಭಜನಾ ಮಂಡಳಿ ಸ್ಥಾಪನೆಗಾಗಿ ನವೆಂಬರ್-೮ ರಂದು ಪೂರ್ವಸಿದ್ಧತಾ ಸಭೆ.

ಗಂಗಾವತಿ: ಪ್ರಸ್ತುತ ಈ ವರ್ಷ ನಡೆದ ಹಾನಗಲ್ಲ ಶ್ರೀ ಕುಮಾರೇಶ್ವರರ ೧೫೮ನೇ ಜಯಂತ್ಯೋತ್ಸವದ ಪ್ರಯುಕ್ತವಾಗಿ ಗಂಗಾವತಿ ನಗರದಲ್ಲಿ ಹಾನಗಲ್ಲ ಶ್ರೀ ಕುಮಾರೇಶ್ವರ ಭಜನಾ ಮಂಡಳಿ ಸ್ಥಾಪಿಸಬೇಕೆಂದು ಇಚ್ಛೆಯನ್ನು ಹೊಂದಿ, ನವೆಂಬರ್-೮ ಶನಿವಾರ, ಸಂಜೆ ೦೪:೦೦ ಗಂಟೆಗೆ ನಗರದ ಹೊಸಳ್ಳಿ ರಸ್ತೆಯಲ್ಲಿ ಬರುವ ಶ್ರೀ ಕೊಟ್ಟೂರೇಶ್ವರ ಸಿಟಿ ಸ್ಕ್ಯಾನಿಂಗ್ ಸೆಂಟರ್ ಹತ್ತಿರದ ಕನ್ನಡ ಜಾಗೃತಿ ಭವನದಲ್ಲಿ ಭಜನಾ ಮಂಡಳಿಯ ಪೂರ್ವ ಸಿದ್ಧತಾ ಸಭೆಯನ್ನು ಕರೆಯಲಾಗಿದೆ ಎಂದು ಶ್ರೀ ಹಾನಗಲ್ಲ ಕುಮಾರೇಶ್ವರ ವೇದ ಮತ್ತು ಸಂಸ್ಕೃತ ಪಾಠಶಾಲೆಯ ಅಧ್ಯಕ್ಷರಾದ ಪರಮಪೂಜ್ಯ ಶ್ರೀ ಶರಣಬಸವ ದೇವರು ಪ್ರಕಟಣೆಯಲ್ಲಿ ತಿಳಿಸಿದರು.

ಈ ಪೂರ್ವಸಿದ್ಧತಾ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಶರಣ ಬಂಧುಗಳು ಪಾಲ್ಗೊಂಡು ಸಭೆಯನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿದ ಅವರು ಪ್ರಸ್ತುತ ವರ್ಷದ ಶ್ರೀ ಹಾನಗಲ್ಲ ಕುಮಾರೇಶ್ವರರ ಜಯಂತಿ ಆಚರಣೆಯನ್ನು ಯಶಸ್ವಿಗೊಳಿಸಿದ ಎಲ್ಲ ಸದ್ಭಕ್ತರಿಗೆ ಧನ್ಯವಾದಗಳನ್ನು ತಿಳಿಸುವುದರ ಮುಖಾಂತರವಾಗಿ ಮುಂಬರುವ ದಿನಗಳಲ್ಲಿ ನಿರಂತರವಾಗಿ ಎಲ್ಲಾ ಶರಣರನ್ನು ಆಧ್ಯಾತ್ಮಿಕವಾಗಿ ಮುನ್ನಡೆಸುವ ಸಲುವಾಗಿ ಗಂಗಾವತಿ ನಗರದಲ್ಲಿ ಶ್ರೀ ಹಾನಗಲ್ಲ ಕುಮಾರೇಶ್ವರರ ಭಜನಾ ಮಂಡಳಿ ಸ್ಥಾಪನೆಗಾಗಿ ಸಹಕರಿಸಲು  ತಿಳಿಸಿದ್ದಾರೆ.https://aratt.ai/@vishwaroopa_news_blog