೭ನೇ ವೇತನ ಆಯೋಗದ ಅನುಷ್ಠಾನದಲ್ಲಿ ನಿವೃತ್ತ ನೌಕರರಿಗೆ ತಾರತಮ್ಯ: ಪರಮಾನಂದ ಶಿವಸಿಂಪರ್

ಗಂಗಾವತಿ: ೧ನೇ ಜುಲೈ ೨೦೨೨ ರಿಂದ ೩೧ನೇ ಜುಲೈ ೨೦೨೪ರ ಅವಧಿಯಲ್ಲಿ ೨೫ ತಿಂಗಳು ಸೇವೆ ಸಲ್ಲಿಸಿ ನಿವೃತ್ತರಾದ ನೌಕರರಿಗೆ ೭ನೇ ವೇತನ ಆಯೋಗದ ಅನುಷ್ಟಾನದಲ್ಲಿ ನಿವೃತ್ತಿ ಉಪಲಬ್ಧಗಳನ್ನು ಪಾವತಿಸುವ ಸಂದರ್ಭದಲ್ಲಿ ಆರ್ಥಿಕ ನಷ್ಟವಾಗಿರುತ್ತದೆ ಎಂದು ಕರ್ನಾಟಕ ನಿವೃತ್ತ ನೌಕರರ ವೇದಿಕೆಯ ಕಲ್ಯಾಣ ಕರ್ನಾಟಕ ವಿಭಾಗ ಸಂಚಾಲಕರಾದ ಪರಮಾನಂದ ಶಿವಸಿಂಪರ್ ಅವರು ಕಳವಳ ವ್ಯಕ್ತಪಡಿಸಿದರು.

ಅವರು ಇಂದು ಸದರಿ ಅವಧಿಯಲ್ಲಿ ನಿವೃತ್ತರಾದ ನೌಕರರಿಗೆ ಆದ ಅನ್ಯಾಯ ಸರಿಪಡಿಸಲು ಒತ್ತಾಯಿಸಿ ತಹಶೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು. ಪ್ರಸ್ತುತ ಸೇವೆಯಲ್ಲಿರುವ ಅಧಿಕಾರಿ ನೌಕರರಂತೆ ನಾವು ಜುಲೈ-೨೦೨೨ ರಿಂದಲೇ ಪಡೆಯಬೇಕಿದ್ದ ನಿವೃತ್ತಿ ವೇತನದ ವ್ಯತ್ಯಾಸವನ್ನು ಕೇಳುತ್ತಿರುವದಿಲ್ಲ, ಬದಲಾಗಿ ನಾವು ಹೇಳುತ್ತಿರುವುದು ೭ನೇ ವೇತನ ಆಯೋಗದ ವರದಿಯಂತೆ ಪರಿಷ್ಕೃತ ವೇತನದ ಮೇಲೆ ನಿವೃತ್ತಿ ಆರ್ಥಿಕ ಸೌಲಭ್ಯಗಳಾದ ಡಿ.ಸಿ.ಆರ್.ಜಿ, ಕಮ್ಯುಟೇಶನ್ ಹಾಗೂ ಗಳಿಕೆ ರಜೆ ನಗದೀಕರಣ ಸೌಲಭ್ಯಗಳ ಲೆಕ್ಕಾಚಾರದ ವ್ಯತ್ಯಾಸದ ಮೊತ್ತವನ್ನು ಮಾತ್ರ ಕೊಡಬೇಕೆಂದು ಕೇಳುತ್ತಿದ್ದೇವೆ. ಈ ನಮ್ಮ ಬೇಡಿಕೆ ಕುರಿತು ನಾವುಗಳು ಈಗಾಗಲೇ ಬೆಳಗಾವಿಯಲ್ಲಿ ಜರುಗಿದ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಸುವರ್ಣಸೌಧದ ಮುಂದೆ ಕಳೆದ ಡಿಸೆಂಬರ್-೧೦ ರಂದು ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಆಗಮಿಸಿದ್ದ ೨೦೦೦೦ ಕ್ಕೂ ಅಧಿಕ ನೌಕರರು ಸಮಾವೇಶಗೊಂಡ ಸಂದರ್ಭದಲ್ಲಿ ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿಯವರು ಘನ ಸರಕಾರದ ವತಿಯಿಂದ ನಮ್ಮ ಮನವಿಯನ್ನು ಸ್ವೀಕರಿಸಿ, ಸಚಿವರೊಂದಿಗೆ ಆಗಮಿಸಿದ್ದ ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ಪಿ.ಸಿ. ಜಾಫರ್ ಅವರು ಅಧಿವೇಶನದ ನಂತರ ಬೆಂಗಳೂರಿನಲ್ಲಿ ತಮ್ಮ ಜೊತೆ ಸಭೆ ಆಯೋಜಿಸಿ ನಿಮ್ಮ ವೇದಿಕೆಯ ಮುಖಂಡರನ್ನು ಮಾತುಕತೆಗೆ ಆಹ್ವಾನಿಸುತ್ತೇವೆ, ಆಗ ತಾವು ಬಂದು ತಮ್ಮ ಆಹವಾಲು ಮಂಡಿಸಿರಿ ಎಂದು ತಿಳಿಸಿದ್ದರು. ಅಲ್ಲದೇ ಸಚಿವ ಸತೀಶ ಜಾರಕಿಹೊಳಿಯವರು ಮುಖ್ಯಮಂತ್ರಿಗಳನ್ನು ಸುವರ್ಣಸೌಧದಲ್ಲಿ ಭೇಟಿಯಾಗಲು ವ್ಯವಸ್ಥೆ ಮಾಡಿದಂತೆ ನಮ್ಮ ವೇದಿಕೆಯ ನಿಯೋಗವು ಡಿಸೆಂಬರ್-೧೬ ರಂದು ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾದಾಗ, ಈ ಅಧಿವೇಶನದ ನಂತರ ಸಭೆ ಕರೆದು ಚರ್ಚಿಸಿ ನಿರ್ಧರಿಸೋಣ ಎಂದು ಹೇಳಿರುತ್ತಾರೆ. ಆದರೆ ಈವರೆಗೂ ಮುಖ್ಯಮಂತ್ರಿಗಳು ಸಭೆ ಏರ್ಪಾಡು ಮಾಡಿರುವುದಿಲ್ಲ. ಈ ನಮ್ಮ ಬೇಡಿಕೆ ಈಡೇರಿಕೆ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿಗಳು ನಮ್ಮ ವೇದಿಕೆಯ ಮುಖಂಡರುಗಳೊಂದಿಗೆ ಒಂದು ವಾರದೊಳಗೆ ದಿನಾಂಕ ನಿಗದಿಗೊಳಿಸಿ ಒಂದು ಸಭೆ ಏರ್ಪಾಡು ಮಾಡಿ ನಮಗೆ ತಿಳಿಸಲು ಜನವರಿ-೩೦ ಮಹಾತ್ಮಾ ಗಾಂಧೀಜಿಯವರ ಪುಣ್ಯತಿಥಿ ಹುತಾತ್ಮರ ದಿನಾಚರಣೆ ಸಂದರ್ಭದಲ್ಲಿ ಗಂಗಾವತಿ ತಾಲೂಕ ದಂಡಾಧಿಕಾರಿಗಳ ಮುಖಾಂತರ ತಮಗೆ ನಮ್ಮ ಬೇಡಿಕೆ ಈಡೇರಿಸಲು ಆಗ್ರಹಿಸಿ ಈ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ನಿವೃತ್ತ ನೌಕರರ ವೇದಿಕೆಯ ಗಂಗಾವತಿ ತಾಲೂಕ ಸಂಚಾಲಕರಾದ ಸುರೇಶ ಪತ್ತಾರ, ಪಂಚಾಕ್ಷರಯ್ಯ, ಎನ್. ಶಿವಪ್ರಸಾದ, ಪರಶುರಾಮ ಕುಷ್ಟಗಿ, ದೇವಪ್ಪ, ದೇವರಾಜ, ನಿರ್ಮಲಮ್ಮ, ಇಮಾಮಸಾಬ್ ಮನಿಯಾರ್, ಮಹಾಂತಗೌಡ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Leave a Reply