ಜಗದ್ಗುರು ಶ್ರೀ ವಿದುಶೇಖರ ಮಹಾಸ್ವಾಮಿಗಳವರ ಉತ್ತರ ಭಾರತ ವಿಜಯಯಾತ್ರೆ ಪ್ರಯುಕ್ತ ಶಾಖಾಮಠಗಳಲ್ಲಿ ವಿಶೇಷ ಪೂಜೆ: ನಾರಾಯಣರಾವ್ ವೈದ್ಯ

ಗಂಗಾವತಿ: ಶೃಂಗೇರಿಯ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ಪರಮಾನುಗ್ರಹಗಳೊಂದಿಗೆ ಹಾಗೂ ಪೂಜ್ಯರ ಸುವರ್ಣ ಮಹೋತ್ಸವ ಆಚರಣೆಯ ಪ್ರಯುಕ್ತ ಕಿರಿಯ ಜಗದ್ಗುರು ಶ್ರೀ ವಿದುಶೇಖರ ಭಾರತಿ ಸನ್ನಿಧಾನಂಗಳವರು ಉತ್ತರ ಭಾರತದ ವಿಜಯ ಯಾತ್ರೆಯ ಪ್ರಯುಕ್ತ ೨೦೦ ಕ್ಕೂ ಅಧಿಕ ಶಾಖಾ ಮಠಗಳಲ್ಲಿ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಗಂಗಾವತಿ ಶಂಕರ ಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ ಹೇಳಿದರು.

ಅವರು ಶುಕ್ರವಾರದಂದು ಶ್ರೀಮಠದ ಆವರಣದಲ್ಲಿ ಧರ್ಮಸಭೆಯನ್ನುದ್ದೇಶಿಸಿ ಮಾತನಾಡಿ, ಶ್ರೀ ವಿದುಶೇಖರ ಮಹಾಸ್ವಾಮಿಗಳು ಧರ್ಮಯಾತ್ರೆಯ ಪ್ರಯುಕ್ತ ಬಳ್ಳಾರಿ, ಗಂಗಾವತಿ ಹಾಗೂ ಹೊಸಪೇಟೆಯ ಬಳಿಕ ತ್ರಿವೇಣಿ ಸಂಗಮ ಕುಂಭಮೇಳದಲ್ಲಿ ಪುಣ್ಯಸ್ನಾನವನ್ನು ನೆರವೇರಿಸುವುದರ ಮೂಲಕ ಶುಕ್ರವಾರದಂದು ಮೋಕ್ಷಪುರಿ ಕಾಶಿಯಲ್ಲಿ ಶ್ರೀ ಅನ್ನಪೂರ್ಣ ದೇವಿ ಮಂದಿರದಲ್ಲಿ ಮಹಾಕುಂಭಾಭಿಷೇಕ ನೆರವೇರಿಸಿದ ಪ್ರಯುಕ್ತ ಶ್ರೀಮಠದಲ್ಲಿ ಬೆಳಗ್ಗೆ ಶ್ರೀ ಶಾರದಾದೇವಿ ಸೇರಿದಂತೆ ಪರಿವಾರ ದೇವರುಗಳಿಗೆ ರುದ್ರಾಭಿಷೇಕ, ಅಷ್ಟೋತ್ತರ ಪಾರಾಯಣ ಹಾಗೂ ಸಂಜೆ ಶ್ರೀ ಜಗದ್ಗುರು ಶಂಕರಾಚಾರ್ಯರು ರಚಿಸಿದ ಲಲಿತ ಸಹಸ್ರನಾಮ ಪಠಣ, ವಿಶ್ವನಾಥಾಷ್ಠಕ ಪಠಣ, ಶ್ರೀ ಕಾಳಭೈರವಾಷ್ಠಕ ಪಠಣ ಸೇರಿದಂತೆ ಶ್ರೀ ಅನ್ನಪೂಣೇಶ್ವರಿಯ ಮಹಾಪಾರಾಯಣ ಅಪಾರ ಭಕ್ತಾದಿಗಳ ಮಧ್ಯೆ ಶ್ರೀ ಶಾರದಾಶಂಕರ ಭಕ್ತಮಂಡಳಿ ಹಾಗೂ ಇತರೆ ಭಜನಾ ಮಂಡಳಿಗಳ ನೇತೃತ್ವದಲ್ಲಿ ಶ್ರದ್ಧೆ, ಭಕ್ತಿಯಿಂದ ಜರುಗಿತು. ಅವಸಾನದ ಅಂಚಿನಲ್ಲಿದ್ದ ಸನಾತನ ಹಿಂದೂ ಧರ್ಮವನ್ನು ರಕ್ಷಿಸಿದ ಆದಿಗುರು ಶ್ರೀ ಶಂಕರಾಚಾರ್ಯರು ಕಾಶಿಯಿಂದಲೇ ಧರ್ಮಜಾಗೃತಿ ನಡೆಸಿರುವುದು ವಿಶೇಷವಾಗಿದೆ. ಸನಾತನ ಎಂಬುವುದು ಪರಂಪರೆ, ಸಂಸ್ಕೃತಿ, ಸಂಪ್ರದಾಯಗಳನ್ನು ಒಳಗೊಂಡಿದ್ದು, ಅವುಗಳನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕೆಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ವೇದಾಬಾಯಿ ಬಾಲಕೃಷ್ಣ ದೇಸಾಯಿ ಶ್ರೀ ಅನ್ನಪೂಣೇಶ್ವರಿ ದೇವಿಯ ಕುರಿತು ಅತಿಥಿ ಉಪನ್ಯಾಸ ನೀಡಿದರು. ಹಾಗೆಯೇ ಆಯ್ದಕ್ಕಿ ಲಕ್ಕಮ್ಮ ವಸತಿ ನಿಲಯದ ೪೦ ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಶ್ರೀ ಶಾರದಾದೇವಿ ಅನುಗ್ರಹ ಕಲ್ಪಿಸುವುದರ ಜೊತೆಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡುವಂತಾಗಲಿ ಎಂದು ಪ್ರಾರ್ಥಿಸಲಾಯಿತು.

ಈ ಸಂದರ್ಭದಲ್ಲಿ ರಾಘವೇಂದ್ರ ಅಳವಂಡಿಕರ್, ಜಗನ್ನಾಥ ಅಳವಂಡಿಕರ್, ಶೇಷಗಿರಿ ಗಡಾದ್, ವೇಣುಗೋಪಾಲ್, ಮೋಹನ ಲೆಕ್ಕಿಹಾಳ, ಸತೀಶ ಕೋಮಲಾಪುರ, ಪ್ರಸನ್ನ ಜೋಷಿ, ದಿಗಂಬರ ವೈದ್ಯ ಸೇರಿದಂತೆ ವಿವಿಧ ಸಮಾಜದ ಬಾಂಧವರು ಪಾಲ್ಗೊಂಡಿದ್ದರು. ಬಳಿಕ ಮಹಾಮಂಗಳಾರತಿ, ತೀರ್ಥಪ್ರಸಾದ ಜರುಗಿತು.

Leave a Reply