ಆತ: ಮದುವೆಯಾಗಿ ಹತ್ತು ವರ್ಷ ಆಯ್ತು. ನಾನು ಈಗಲೂ ಒಬ್ಬಳನ್ನು ಪ್ರೀತಿಸ್ತಿದ್ದೀನಿ.
ಈತ: ನಿನ್ನ ಹೆಂಡ್ತಿನ ಅಷ್ಟೊಂದು ಪ್ರೀತಿಸ್ತೀಯಾ..?
ಆತ: ಹೆಂಡತಿನ ಯಾರದ್ರು ಪ್ರೀತಿ ಮಾಡ್ತಾರಾ..?
ಈತ: ಹಾಗಾದ್ರೇ ಅವಳು ಬೇರೇನಾ..ಯಾರು ಅವಳು..?
ಆತ: ಅವಳ್ಯಾರು ಅಂತ ಹೇಳಿದ್ರೇ ನನ್ನ ಹಂಡತಿ ಕಿಕ್‌ಹೌಟ್ ಮಾಡ್ತಾಳೆ.
ಈತ: ನೀವು ಒಳ್ಳೆಯ ಹಾಸ್ಯ ಸಾಹಿತಿಗಳು ಖರೆ, ನಿಮ್ಮ ಹಾಸ್ಯ ಬರಹಗಳ ಐವತ್ತು ಪುಸ್ತಕಗಳು ಪ್ರಕಟವಾಗಿವೆ ಬರಾಬರ್ ಓಕೆ. . ಆದರೆ ಇದಾದ ಮೇಲೆ ನಿಮ್ಮಲ್ಲಿ ಆಗಿರುವ ಬದಲಾವಣೆ ಆದರೂ ಏನು ಮಾರಾಯರೇ..!
ಆತ: ಮೊದಲು ನಾನು ಬರೆಯಲು ಖುರ್ಚಿ ಮತ್ತು ಟೇಬಲ್ ಮಾತ್ರ ಉಪಯೋಗಿಸುತ್ತಿದ್ದೆ. ಈಗ ನೆಲದ ಮೇಲೆ ಕುಳಿತೇ ಬರಿತ್ತಿದ್ದಿನಿ. ಬೆನ್ನು ಇನ್ನು ಬಾಗಿಲ್ಲ. ತಲೆ ಕೂದಲಿಗೆ ಮಾತ್ರ ಕಪ್ಪು ಬಣ್ಣ ಹಚ್ಚಿದ್ದೇನೆ. ನನ್ನ ಬರಹಕ್ಕೆ ಅಲ್ಲಾ..
ಈತ: ನಿನ್ನ ಹೆಂಡತಿಗೆ ಅವಳಿ ಜವಳಿ ಮಕ್ಕಳಾಯಿತು ಅಂತ ಕೇಳಿ ತುಂಬಾ ಸಂತೋಷ ಆಯಿತು ಮಾರಾಯ. ಆದರೆ ಪಾಪ ಸಿಜೇರಿಯನ್‌ಗೆ ತುಂಬಾ ಹಣ ಖರ್ಚಾಗಿದೆಯೆಂದು ತಿಳಿದು ಬೇಸರವಾಯಿತು.
ಆತ: ಆದ್ರೂ ಒಂದೇ ಖರ್ಚಿನಲ್ಲಿ ಎರಡು ಮಕ್ಕಳಾಯಿತ್ತಲ್ಲ ಅದೇ ಸಂತೋಷ ದೋಸ್ತಾ…
ಈತ: ನನಗೆ ತುಂಬಾ ಬೇಜಾರಾಗಿದೆ. ಅದಕ್ಕೆ ಬಾರ್‌ನಲ್ಲಿ ಎರಡು ಪೆಗ್ ಕುಡಿದೆ.
ಆತ: (ಮನದಲ್ಲಿ) ಎಲ್ಲಾ ಬಡ್ಡಿ ಮಗ ನನ್ನ ಕರೆಯದೇ ಹೋಗಿದ್ದಿಯಾ ಚಾಂಡಲ (ಪ್ರಕಟ) ಹೌದಾ..! ಏನಾಗಿದೆ ನಿನಗೆ..?
ಈತ: ನನ್ನ ಹೆಂಡತಿ ಎರಡು ತಿಂಗಳ ಹಿಂದೆ ತಾಯಿ ಮನೆಗೆ ಹೋದವಳು ತಿರುಗಿ ಬಂದಿಲ್ಲ.
ಆತ: ಎಂತಹ ಅದೃಷ್ಟವಂತನಯ್ಯ ನೀನು. ನನ್ನ ದುರಾದೃಷ್ಟ ನೋಡು ನನ್ನ ಹೆಂಡತಿ ಕತ್ತು ಹಿಡಿದು ದಬ್ಬಿದರೂ ತೌರಿಗೆ ಅಂತ ಈ ಊರು ಬಿಟ್ಟು ಹೋಗ್ತಿಲ್ಲ. ಅವಳ ಕಾಟ ತಡೆಯಲಾಗದೆ ಬಾರ್‌ಗೆ ಕುಡಿಯೋಕೆ ಹೋಗ್ತ ಇದ್ದಿನಿ. ಬರ‍್ತಿಯಾ, ಕಂಪನಿ ಕೊಡ್ತಿಯಾ..?
ಈತ: ಷಹಜಹಾನ್ ತಾಜ್ ಮಹಲ್ ಏಕೆ ಕಟ್ಟಿಸಿದ ಗೊತ್ತಾ ದೋಸ್ತಾ..
ಆತ: ಹೆಂಡತಿಯ ಮೇಲೆ ತುಂಬಾ ಪ್ರೀತಿ ಇತ್ತು ಅದಕ್ಕೆ ಅಲ್ವಾ ಮಾರಾಯ..
ಈತ: ನನಗೇನೋ ಅನುಮಾನ. ಹೆಂಡತಿ ಸತ್ತ ಖುಷಿಗೂ ಏಕಿರಬಾರದು. ಹೌದಲ್ಲೋ..?
ಆತ: ಇಬ್ಬರು ಹೆಂಗಸರು ನನ್ನ ಬದುಕನ್ನು ನರಕ ಮಾಡಿಬಿಟ್ಟರು ಮಾರಾಯ
ಈತ: ಯಾರಪ್ಪ ಆ ಪುಣ್ಯಾತಗಿತ್ತಿಯರು..
ಆತ: ನನ್ನ ಮೊದಲನೇ ಹೆಂಡತಿ ಸಾಯುವ ತನಕ ಕಾಟ ಕೊಟ್ಟಳು. ಈಗ ಎರಡನೇ ಹೆಂಡತಿ ಕಾಟ ತಡೆಯಲಾರದೆ ಜೀವನ ನರಕ ಆಗಿದೆ.
ಈತ: ಏನಯ್ಯ ಮದುವೆ ಮಾಡಿಕೊಂಡಿದ್ದಿಯೋ ಅಥವಾ ಈಗಲೂ ನೀನೇ ಅಡುಗೆ ಮಾಡಿಕೊಂಡು ಊಟ ಮಾಡುತ್ತಿದ್ದಿಯೋ ಏನು ಕತೆ.
ಆತ: ಎರಡು ಪ್ರಶ್ನೆಗಳನ್ನು ಒಟ್ಟಿಗೆ ಕೇಳಿದ್ರೇ ಹೇಗೆ ದೋಸ್ತಾ. ನಿನ್ನ ಎರಡು ಪ್ರಶ್ನೆಗಳಿಗೂ ಒಂದೇ ಉತ್ತರ ಬರೆದುಕೋ ಹೌದು.
ಈತ: ನನ್ನ ಹೆಂಡತಿ ತುಂಬಾ ಸೋಮಾರಿ. ಆದರೆ ತಾಯಿ ಮನೆಗೆ ಹೋಗು ಅಂದ್ರೇ ಮಾತ್ರ ಬೇಗ ಸೀರೆಗಳನ್ನು ಬ್ಯಾಗಿಗೆ ತುಂಬಿಕೊಂಡು ರೆಡಿಯಾಗ್ತಾಳೆ ಗೆಳೆಯ.
ಆತ: ನನ್ನ ಹೆಂಡತಿ ಇನ್ನೂ ಸೋಮಾರಿ ಮಾರಾಯ. ತಾಯಿ ಮನೆಲೇ ಐದಾರು ಸೀರೆ ಇಟ್ಟಿರ‍್ತಾಳೆ.
ಈತ: ನೀವು ಬರೆದಿರುವ ವ್ಯಂಗ್ಯಚಿತ್ರಕ್ಕೆ ಬಹುಮಾನ ಬಂದಿದೆ. ಕಂಗ್ರಾಚುಲೇಶನ್.
ಆತ: ಎಲ್ಲಾ ಇದೇ ರೀತಿ ಹೇಳ್ತಿದ್ದಾರೆ. ಆದರ ನಾನು ವ್ಯಂಗ್ಯಚಿತ್ರವನ್ನೇ ಬರೆದಿಲ್ಲ.
ಈತ: ಮತ್ತೆ ಬಹುಮಾನ ಹೇಗೆ ಬಂತು..?
ಆತ: ಪತ್ರಿಕೆಯವರು ವ್ಯಂಗ್ಯಚಿತ್ರ ಸ್ಫರ್ಧೆ ಮತ್ತು ಕಥಾ ಸ್ಫರ್ಧೆ ಎರಡನ್ನೂ ದೀಪಾವಳಿ ವಿಶೇಷಾಂಕಕ್ಕೆ ಕರೆದಿದ್ರು. ನಾನು ಕಥೆ ಜೊತೆಗೆ ನನ್ನ ಪೋಟೊ ಕಳಿಸಿದ್ದೆ. ನನ್ನ ಪೋಟೋನೇ ವ್ಯಂಗ್ಯಚಿತ್ರವೆಂದು ತಪ್ಪಾಗಿ ಭಾವಿಸಿ ಬಹುಮಾನ ಕೊಟ್ಟಿದ್ದಾರೆ.
ಈತ: ನಿನ್ನ ಹೆಂಡ್ತಿ ಕಾಣೆಯಾಗಿದ್ದಾಳೆ ಅಂತ ಬೀದಿಯಲ್ಲಿ ಮಾತನಾಡ್ತಿದ್ದರಲ್ಲಾ.. ಪೇಪರ್‌ನಲ್ಲಿ ಹಾಕ್ಸೋದಿಲ್ವೇ..?
ಆತ: ಅದನ್ನೇ ಯೋಚಿಸ್ತಿದ್ದಿನಿ. ಒಂದು ಹತ್ತು ದಿನ ಕಳೆಯಲಿ. ಹೆಂಡತಿ ಕಾಣೆಯಾಗಿ ಮೂರು ದಿನ ಆಗಿಲ್ಲ. ಆಗಲೇ ಹೆಂಡತಿ ಬೇಕು ಅಂತ ಜಾಹೀರಾತು ಕೊಟ್ಟಿದ್ದಾನಲ್ಲಾ ಬಡ್ಡಿ ಮಗ ಅಂತ ಜನ ನನ್ನ ಬಗ್ಗೆ ತಪ್ಪಾಗಿ ತಿಳ್ಕೋಬಾರದಲ್ವಾ..!
ಈತ: ನಾನು ಒಂದು ಮದುವೆ ಮಾಡಿಕೊಳ್ಳಬೇಕೆಂದಿದ್ದೇನೆ..
ಆತ: ಎಲ್ಲರೂ ಒಂದೇ ಮದುವೆ ಮಾಡಿಕೊಳ್ಳೋದು ದೋಸ್ತಾ
ಈತ: ಪ್ರೀತಿ ಮಾಡಿ ಆಮೇಲೆ ಮದುವೆ ಆದ್ರೇ ತುಂಬಾ ಚೆನ್ನಾಗಿರುತ್ತೆ ಅಲ್ವಾ ದೋಸ್ತಾ,,
ಆತ: ಪ್ರೀತಿ ಮಾಡೋದೇನೋ ತುಂಬಾ ಚೆನ್ನಾಗಿರುತ್ತೆ. ಆದರೆ ಮದುವೆ ಆಗೋದು ಚೆನ್ನಾಗಿರೊಲ್ಲ..
ಈತ: ಏನು ಸ್ವಾಮಿ ನೀವು ಕೇಳ್ತಾ ಇರೋದು. ಹುಡುಗಿಯನ್ನು ಕೊಟ್ಟು ಜೊತೆಗೆ ವರದಕ್ಷಿಣೆನೂ ಕೊಡಬೇಕೆ..?
ಆತ: ನಿಮಗೆ ಎರಡು ಕೊಡೋದಿಕ್ಕೆ ಇಷ್ಟವಿಲ್ಲದಿದ್ರೇ ವರದಕ್ಷಿಣೆ ಕೊಡಿ. ನಿಮ್ಮ ಹುಡುಗಿ ನಿಮ್ಮ ಮನೆಯಲ್ಲೇ ಇರಲಿ ಏನಂತೀರಿ..?
ಈತ: ನೋಡು ಗೆಳೆಯ, ಟೈಂಪಾಸ್‌ಗೆ ಅಂತ ಒಂದು ಪ್ರಶ್ನೇ ಕೇಳ್ತಿನಿ. ಉತ್ತರ ಹೇಳ್ತಿಯಾ..
ಆತ: ನೋಡು ಮೈಸೂರಿನಿಂದ ಹಾಸನಕ್ಕೆ ಒಂದುರೈಲು ೫೦ ಕಿ.ಮೀ.ವೇಗದಲ್ಲಿ ಮತ್ತು ಒಂದು ಕಾರು ೫೦ ಮೈಲಿ ವೇಗದಲ್ಲಿ ಬರ‍್ತಾ ಇದ್ರೇ ನನ್ನ ವಯಸ್ಸೆಷ್ಟು..?
ಈತ: ನಿನ್ನ ವಯಸ್ಸು ಐವತ್ತು.
ಆತ: ಅರೇ..! ಸರಿಯಾದ ಉತ್ತರ. ಲೆಕ್ಕಾಚಾರ ಯಾವ ರೀತಿ ಮಾಡ್ದೇ ದೋಸ್ತಾ..?
ಈತ: ಲೆಕ್ಕಾಚಾರ ಎಲ್ಲಿ ಬಂತು ಮಣ್ಣು. ಆಚೆ ಬೀದಿಲಿ ಒಬ್ಬ ಅರೆಹುಚ್ಚ ಇದ್ದಾನೆ. ಅವನ ವಯಸ್ಸು ಇಪ್ಪತ್ತೈದು. ನೀನು ಸಂಪೂರ್ಣ ಹುಚ್ಚ ಇದ್ದಿ. ಅದಕ್ಕೆ ಐವತ್ತು..!
ಆತ: ಈಗಿನ ಕಾಲದಲ್ಲಿ ಗಂಡು ಯಾರೋ ಹೆಣ್ಣು ಯಾರೋ ಎಂದು ಪತ್ತೆ ಮಾಡೋದೆ ಕಷ್ಟ. ಅಲ್ಲಿ ನೋಡು ದೋಸ್ತಾ. ಆ ಡ್ಯಾನ್ಸ್ ಮಾಡುತ್ತಿರುವ ಹುಡುಗ ಹೇಗೆ ಹುಡುಗಿಯ ಹಾಗೇ ನುಲಿದಾಡುತ್ತಿದ್ದಾನೆ.
ಆಕೆ: ಯಾರ್ ಹೇಳಿದ್ದು. ಅವಳು ಹುಡುಗ ಅಂತ..?
ಆತ: ಸಾರಿ ನನಗೆ ಗೊತ್ತಾಗಲಿಲ್ಲ. ನೀವು ಅವಳ ತಂದೆ ಅಂತ ಕಾಣ್ಸುತ್ತೆ..?
ಆಕೆ: ಯಾರ‍್ರೀ ತಂದೆ..! ನಿಮಗೆ ಕಣ್ಣು ಕಾಣ್ಸೊಲ್ವ..? ನಾನು ಅವಳ ತಾಯಿ.
ಆತ: ಇದು ಯಾವ ಸೀಮೆ ಊರಯ್ಯ. ಯಾವ ಅಂಗಡಿಯಲ್ಲಿ ಕೇಳಿದ್ರು ಸಿಗ್ತಿಲ್ಲ.
ಈತ: ಅಂಥದ್ದೇನು ಕೇಳ್ದಯ್ಯಾ ನೀನು..?
ಆತ: ಅಂಥದ್ದೇನು ಇಲ್ಲ. ಕೇವಲ ಸಾಲ ಮಾತ್ರ ಕೇಳ್ದೆ ಅಷ್ಟೇ. ಹೀ..ಹೀ.. (ಪೆಚ್ಚು ನಗೆ)
ಈತ: ನನ್ನ ಹೆಂಡತಿ ನನಗಿಷ್ಟವಾದ ತರಕಾರಿ ಹಾಕಿ ಅಡಿಗೆ ಮಾಡುವುದಿಲ್ಲ. ಅದಕ್ಕೆ ತಕ್ಕ ಶಾಸ್ತಿ ಮಾಡಿದೆ.
ಆತ: (ಗಾಬರಿ ಧ್ವನಿಯಲ್ಲಿ) ಏನು ಮಾಡಿದೆ ಮಾರಾಯ..?
ಈತ: ನಾನೇ ಅಡುಗೆ ಮಾಡಲು ಪ್ರಾರಂಭಿಸಿದೆ.
ಆತ: ಹೋ ಹೌದ..? ನಿನ್ನ ಕೈ ರುಚಿ ನೋಡಬೇಕಯ್ಯ. ಇವತ್ತು ರಾತ್ರಿ ನಿಮ್ಮ ಮನೆಗೆ ಊಟಕ್ಕೆ ಬರ‍್ತಿನಿ.
ಈತ: ಇನ್ನು ಮುಂದೆ ನಿನಗೆ ಕೆಟ್ಟಕಾಲ ಪ್ರಾರಂಭವಾಯಿತು.
ಆತ: ಅದ್ಹೇಗೆ ಹೇಳ್ತಿಯ..? ನಿನಗೇನು ಜೋತಿಷ್ಯ ಗೊತ್ತ..?
ಈತ: ಇದನ್ನು ಹೇಳೋದಿಕ್ಕೆ ಜ್ಯೋತಿಷ್ಯ ಏಕೆ ಗೊತ್ತಿರಬೇಕು. ನಿನ್ನ ಮದುವೆ ಬರುವ ಭಾನುವಾರ ಅಂತ ಈಗ ತಾನೇ ಹೇಳಿದೆಯೆಲ್ಲಾ..!
ಗೊರೂರು ಅನಂತರಾಜು, ಹಾಸನ.
ಮೊಬೈಲ್: ೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ಶ್ರೀ ಶನೇಶ್ವರ ದೇವಸ್ಥಾನ ರಸ್ತೆ, ಹಾಸನ-೫೭೩೨೦೧,