ಗಂಗಾವತಿ: ಮೊದಲನೆಯದಾಗಿ ನಾಡಿನ ಸಮಸ್ತ ಮಹಿಳೆಯರಿಗೆ ” ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಷಯಗಳು”. ಸಾಧನೆ ಮತ್ತು ಕಷ್ಟ ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಕಷ್ಟ ತೊಂದರೆ ಇಲ್ಲದ ಸಾಧನೆಯನ್ನು ಕೊಂಡಾಡುವಾಗ ಸಮಾಜವು ‘ಸಾಧನೆ’ ಎಂದು ಕರೆಯುವುದಕ್ಕೆ ಲೆಕ್ಕವಿಲ್ಲದಷ್ಟು ಸಬೂಬನ್ನು ಲೇಪಿಸಿ ಸಾಧನೆಯ ಮೆರಗನ್ನೆ ಬರಿದು ಮಾಡುತ್ತದೆ. ಸಮಾಜದ ಲೆಕ್ಕ ಬಿಡಿ, ಸಾಧಕನ ಮನಸ್ಸೆ ಶ್ರಮವಿರದ, ಕಷ್ಟವಿರದ ಸಾಧನೆಯನ್ನು ಒಪ್ಪಿಕೊಳ್ಳುವದಿಲ್ಲ. ಅದರಲ್ಲಿಯೂ ಮಹಿಳೆಯರ ಸಾಧನೆಯ ಆದಿಯು ಪುರುಷರ ಸಾಧನೆಯ ಹಾದಿಗಿಂತಲೂ ಕಷ್ಟದಾಯಕವಾಗಿರುತ್ತದೆ. ಆಧುನಿಕ ಕಲ್ಯಾಣ ಸಮಾಜದಲ್ಲಿ ಸಮಾನತೆಯ ಮಂತ್ರದ ಗುಣಗಾನ ಸದ್ದು ಮಾಡುತ್ತಿದ್ದರೂ, ಪುರುಷ ಪ್ರಧಾನ ವ್ಯವಸ್ಥೆ ವಾಸ್ತವವಾಗಿರುವುದು ಸತ್ಯ. ಈ ವ್ಯವಸ್ಥೆಯಲ್ಲಿ ಲಕ್ಷಕ್ಕೆ ಒಬ್ಬರಾದರೂ ಮಹಿಳಾ ಸಾಧಕಿಯರು ನಮ್ಮ ನಿತ್ಯದ ಬದುಕಿನ ವಾತಾವರಣದಲ್ಲಿ ಜೀವನಕ್ಕೆ ಸ್ಪೂರ್ತಿಯಾಗುತ್ತಿರುವುದು ವಿಶೇಷ. ಅಂತಹ ಮಹಿಳಾ ಸಾಧಕರೆ, ಕರಾಟೆ ಪಟು ಮತ್ತು ತರಬೇತುದಾರರಾದ ಕಲ್ಯಾಣಿ ಅಪ್ಸಾನಿ.
ಕಲ್ಯಾಣಿಯವರು ಬಾಲ್ಯದಲ್ಲಿಯೇ ಗ್ರಾಮೀಣ ಬದುಕಿನ ಹಿನ್ನೆಲೆ ಹೊಂದಿದವರಾಗಿದ್ದು, ಉತ್ತಮ ಶಿಕ್ಷಣ ಪಡೆದು ಕನ್ನಡ ಶಿಕ್ಷಕಿಯಾಗಿ ಗಂಗಾವತಿಯ ಪ್ರತಿಷ್ಟಿತ ವಿದ್ಯಾಸಂಸ್ಥೆಯಲ್ಲಿ ಕರ್ತವ್ಯನಿರ್ವಹಿಸುತ್ತಿದ್ದಾರೆ. ಉತ್ತಮ ಕೌಟುಂಬಿಕ ಹಿನ್ನೆಲೆಯನ್ನು ಹೊಂದಿರುವ ಕಲ್ಯಾಣಿಯವರಿಗೆ ತಮ್ಮ ಜೀವನದಲ್ಲಿ ಉಂಟಾದ ಕೌಟುಂಬಿಕ ಬಿರುಕು-ತೊಂದರೆಗಳ ಸವಾಲಿನ ಸಾಲುಗಳೆ ಅವರು ಒಬ್ಬ ಆದರ್ಶ ಕ್ರೀಡಾಪಟು ಮತ್ತು ತರಬೇತುದಾರರಾಗಿ ಸಾಧನೆ ಮಾಡುವುದಕ್ಕೆ ಮೆಟ್ಟಿಲಾಗಿದೆ. ಯಾವುದೇ ರೀತಿಯ ಕ್ರೀಡೆಯ ಹಿನ್ನೆಲೆಯನ್ನು ಹೊಂದಿರದ ಅವರಿಗೆ ಸಾಧಿಸಬೇಕೆಂಬ ತುಡಿತದಲ್ಲಿದ್ದಾಗ, ಅವರನ್ನು ಒಬ್ಬ ಮಹಿಳಾ ಕರಾಟೆ ಕ್ರೀಡಾಪಟು ಮತ್ತು ತರಬೇತುದಾರರನ್ನಾಗಿ ಮಾಡಿದ ಕೀರ್ತಿ ಗಂಗಾವತಿಯ ಡ್ರೀಮ್ ವರ್ಲ್ಡ್ ಮಾರ್ಷಲ್ ಆರ್ಟ್ಸ್ ಸಂಸ್ಥೆಯ ಸಂಸ್ಥಾಪನಾ ಕಾರ್ಯದರ್ಶಿಗಳಾದ ಹಾಗೂ ಖ್ಯಾತ ಅಂತರಾಷ್ಟ್ರೀಯ ಕರಾಟೆ ತರಬೇತುದಾರರಾದ ಡಾ. ಜಬೀವುಲ್ಲಾ ಗುರುಗಳಿಗೆ ಸಲ್ಲುತ್ತದೆ. ಶ್ರೀಮತಿ ಕಲ್ಯಾಣಿಯವರು ತಮ್ಮ ೩೦ನೇ ವಯಸ್ಸಿನಲ್ಲಿ ಕರಾಟೆ ಕಲಿಯುವುದಕ್ಕೆ ಪ್ರಾರಂಭಿಸಿ ನಿರಂತರವಾಗಿ ೦೨ ವರ್ಷಗಳ ಕಾಲ ದೇಹ ದಂಡಿಸಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕಾಲ್ಪನಿಕ ಯುದ್ಧ ಕಲೆ ಮತ್ತು ಫೈಟ್ ವಿಭಾಗ ಎರಡರಲ್ಲಿಯೂ ಪ್ರಥಮ ಸ್ಥಾನದೊಂದಿಗೆ ಪದಕ ಪಡೆದಿರುತ್ತಾರೆ. ಅಲ್ಲದೆ ಕಳೆದ ವರ್ಷ (೨೦೨೪) ಹುಬ್ಬಳ್ಳಿಯಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕಾಲ್ಪನಿಕ ಯುದ್ಧ ಕಲೆ ಮತ್ತು ಫೈಟ್ ವಿಭಾಗ ಎರಡರಲ್ಲಿಯೂ ಪ್ರಥಮ ಸ್ಥಾನದೊಂದಿಗೆ ಪದಕ ಪಡೆದಿರುತ್ತಾರೆ. ಇದು ಕಲ್ಯಾಣಿಯವರ ಸಾಧನಾ ಕ್ಷೇತ್ರಕ್ಕೆ ಮೂಡಿದ ಗರಿಮೆಯಾಗಿದೆ.
ಕೇವಲ ಕರಾಟೆ ಪಟುಗಳಾಗಿ ಸಾಧನೆ ಮಾಡುವುದಲ್ಲದೇ, ಡಾ. ಜಬೀವುಲ್ಲಾ ಗುರುಗಳ ಗರಡಿಯಲ್ಲಿ ಕರಾಟೆ ಪಟ್ಟುಗಳನ್ನು ಕರಗತ ಮಾಡಿಕೊಂಡು, ಕರಾಟೆ ಕ್ಷೇತ್ರದಲ್ಲಿ ತರಬೇತುದಾರರಾಗುವುದಕ್ಕೆ ಬೇಕಾದ ‘ಬ್ಲ್ಯಾಕ್ ಬೆಲ್ಟ್’ (೧೦ನೇ) ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಗಂಗಾವತಿ ನಾಡಿನ ಭಾಗದಲ್ಲಿ ಅತ್ಯುತ್ತಮ ಕರಾಟೆ ತರಬೇತುದಾರರಾಗಿಯೂ ಗುರುತಿಸಿಕೊಂಡಿದ್ದಾರೆ. ಮುಂದುವರೆದು ಇವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದ ವಿದ್ಯಾರ್ಥಿನೀಯರು ರಾಜ್ಯ ಮತ್ತು ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕ ಪಡೆದಿರುವುದು ಪ್ರಶಂಸನೀಯವಾಗಿದೆ. ಅಲ್ಲದೆ ಸಾಮಾಜಿಕ ಕಳಕಳಿಯನ್ನು ಹೊಂದಿರುವ ಕಲ್ಯಾಣಿಯವರು ಬಡ ಮಕ್ಕಳಿಗೆ ಉಚಿತವಾಗಿ ತರಬೇತಿ ನೀಡಿ, ಉತ್ತಮ ಕ್ರೀಡಾಪಟುಗಳನ್ನಾಗಿ ಬೆಳೆಸುವಂತಹ ಮಹಾನ್ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ.
ಸರ್ಕಾರದ ವಸತಿ ಶಾಲಾ ವಿಧ್ಯಾರ್ಥಿನಿಯರಿಗೆ “ಓಬವ್ವ ಆತ್ಮ ರಕ್ಷಣಾ ಕಲೆ” ಯೋಜನೆಯ ಅಡಿಯಲ್ಲಿ ಕನಕಗಿರಿ, ಮೇಹದಾಳ ಕಿತ್ತೂರರಾಣಿ ಚೆನ್ನಮ್ಮ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಮಕ್ಕಳಿಗೆ ನಿರಂತರವಾಗಿ ತರಬೇತಿ ನೀಡುತ್ತಿದ್ದಾರೆ.
ಕಲ್ಯಾಣಿಯವರ ಕರಾಟೆ ಕ್ಷೇತ್ರದಲ್ಲಿನ ಸೇವೆಯನ್ನು ಗುರುತಿಸಿದ ಗಂಗಾವತಿಯ ಡ್ರೀಮ್ ವರ್ಲ್ಡ್ ಮಾರ್ಷಲ್ ಆರ್ಟ್ಸ್ ಸಂಸ್ಥೆಯು ಅವರಿಗೆ “ಕ್ರೀಡಾ ರತ್ನ” ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಅದರ ಜೋತೆಗೆ ಸಂಸ್ಥೆಯ ಸಂಘಟನಾ ಕಾರ್ಯದರ್ಶಿಯ ಸ್ಥಾನವನ್ನು ನೀಡಿ ಸಾಧನೆಯ ಪಥದಲ್ಲಿ ಸಾಗುವಂತೆ ಜವಾಬ್ದಾರಿ ವಹಿಸಲಾಗಿರುತ್ತದೆ.
‘ಸಾಧನೆ ಮಾಡುವದಕ್ಕೆ ವಯಸ್ಸಿನ ಲೆಕ್ಕ ನೆವತ್ಯ’ ಎನ್ನುವ ಸತ್ಯವನ್ನು ಕಲ್ಯಾಣಿಯವರ ಸಾಧನೆಯೇ ಮುಂದಿನವರಿಗೆ ದಾರಿಯಾಗಲಿದೆ. ಮನೆಯವರ ಮತ್ತು ಕುಟುಂಬದವರ ಸಹಾಯವಿರದಿದ್ದರೂ, ಸಾಧಿಸುವ ಛಲವಿರುವ ಮಹಿಳೆ, ಎಷ್ಟೇ ತೊಂದರೆಗಳು ಎದುರಾದರೂ ಸಾಧನೆಗೆ ಆ ತೊಂದರೆಗಳೇ ಮೆಟ್ಟಿಲಾಗಿ ಪರಿವರ್ತನೆಗಳಾಗುತ್ತವೆ ಎಂಬುದು ಕಲ್ಯಾಣಿ ರವರ ಸಾಧನೆಯ ಪಯಣ ಮಾದರಿಯಾಗಿದೆ.