ಹಾಸನ ಜಿಲ್ಲೆಯು ಕನ್ನಡ ರಂಗಭೂಮಿಗೆ ತನ್ನದೇ ಆದಂತಹ ಎಂದೆಂದಿಗೂ ಮರೆಯಲಾಗದಂತಹ ಕಾಣಿಕೆಗಳನ್ನು ನೀಡಿದೆ. ಹಿಂದಿನ ಕಾಲದಿಂದಲೂ ನಾಟಕ ರಂಗಭೂಮಿಗೆ ಹಾಸನದಲ್ಲಿ ವಿಶೇಷ ಮನ್ನಣೆ ದೊರಕಿದೆ. ರಂಗಕ್ಷೇತ್ರದಲ್ಲಿ ನಟರು, ರಚನೆಕಾರರು, ಗಾಯಕರು, ನಿರ್ದೇಶಕರು ಮತ್ತು ತಂತ್ರಜ್ಞರು ಸೇರಿದಂತೆ ಹಲವರನ್ನು ಪರಿಚಯಿಸುವ ಮೂಲಕ ಸಾಹಿತ್ಯ ರಚನೆಯಲ್ಲಿ ವಿಭಿನ್ನ ಶೈಲಿಯನ್ನು ರೂಪಿಸಿರುವ ವ್ಯಕ್ತಿ ಗೊರೂರು ಅನಂತರಾಜು.
ಅವರು ರಚಿಸಿರುವ “ನಿಂತು ಹೋದ ಕನ್ನಡ ರಂಗವೈಭವ” ಎಂಬ ಕೃತಿಯ ಶೀರ್ಷಿಕೆಯೇ ನಾಟಕದ ಚೈತನ್ಯ ಸ್ಥಗಿತಗೊಂಡಿರುವುದನ್ನು ಸೂಚಿಸುತ್ತದೆ. ಅವರು ನಾಟಕಗಳ ಬೆಳವಣಿಗೆ, ಆಧುನಿಕತೆ ಮತ್ತು ಅದರ ತೀವ್ರ ಕುಸಿತದ ಬಗ್ಗೆ ಚಿಂತನಾತ್ಮಕವಾಗಿ ಬರೆಯುತ್ತಾರೆ. ರಂಗಭೂಮಿಯ ನೈತಿಕ, ಸಾಂಸ್ಕೃತಿಕ ಮತ್ತು ತಾಂತ್ರಿಕ ಬದಲಾವಣೆಗಳನ್ನು ವೈಯಕ್ತಿಕ ಅನುಭವಗಳ ಮೂಲಕ ಕಟ್ಟಿಕೊಡುತ್ತಾರೆ.
ಈ ಕೃತಿಯಲ್ಲಿ ಕಲಾವಿದರ ಪರಿಚಯವೊಂದರ ಮೂಲಕ ತೃಪ್ತಿಯಾಗದೆ, ರಂಗಭೂಮಿಯ ತಾತ್ವಿಕತೆಯನ್ನೂ ವಿಶ್ಲೇಷಣೆ ಮಾಡಲಾಗಿದೆ. ಲೇಖಕರ ಭಾಷೆ ಸರಳವಾಗಿದ್ದು, ಭಾವಪೂರ್ಣತೆಯಿಂದ ಕೂಡಿದೆ. ಓದುಗರಿಗೆ ಪ್ರತಿಯೊಂದು ಪುಟ ಆಲೋಚನೆಗೆ ಆಹ್ವಾನ ನೀಡುತ್ತದೆ.
ಕೃತಿಯಲ್ಲಿರುವ ಪ್ರಮುಖ ಅಂಶಗಳಲ್ಲಿ ಒಂದು ರಂಗಭೂಮಿಯ ಪತನವಾಗಿದೆ. ನಾಟಕವು ಒಂದು ಕಾಲದಲ್ಲಿ ಸಮಾಜದ ದರ್ಪಣವಾಗಿತ್ತೆಂದು ಲೇಖಕರು ವಿವರಿಸುತ್ತಾರೆ. ನಾಟಕಗಳ ಒಡನಾಡಿತನ, ಸಾಮಾಜಿಕ ಪಾತ್ರ ಇಂದು ನಿಧಾನವಾಗಿ ಕಡಿಮೆಯಾಗುತ್ತಿದೆ ಎಂದು ಅವರು ಸೂಚಿಸುತ್ತಾರೆ.
ಕೃತಿಯಲ್ಲಿ ನಟರು, ರಚನೆಕಾರರು, ಗಾಯಕರು, ನಿರ್ದೇಶಕರು, ತಂತ್ರಜ್ಞರು ಹೀಗೆ ಎಲ್ಲರನ್ನು ಒಳಗೊಂಡಂತೆ ಹಲವು ವ್ಯಕ್ತಿಗಳ ಪರಿಚಯ, ನಾಟಕ ರಚನೆ, ಅಭಿನಯದ ಕಥನಗಳು ಚಿತ್ರಣವಂತಾಗಿವೆ. ಇದರಿಂದ ಓದುಗರಿಗೆ ಕೇವಲ ವಿಷಯವಷ್ಟೇ ಅಲ್ಲ, ಭಾವನಾತ್ಮಕ ಅನುಭವವು ದೊರಕುತ್ತದೆ. ಈ ಕೃತಿಯು ಒಂದು ಕಾಲದಲ್ಲಿ ನಾಟಕವು ಸಮಾಜದ ದರ್ಪಣವಾಗಿತ್ತು ಎಂಬುದನ್ನು ನೆನಪಿಸುತ್ತದೆ.
ಈಗ ಅದು ಮನರಂಜನೆಯ ಉಪಕರಣವಾಗಿ ಕುಸಿದಿರುವ ಸ್ಥಿತಿಯನ್ನು, ಸ್ತಬ್ಧತೆಯ ಪರಿಸ್ಥಿತಿಯನ್ನು ಕೃತಿಯಲ್ಲಿ ಲೇಖಕರು ಸ್ಪಷ್ಟವಾಗಿ ಚಿತ್ರಿಸುತ್ತಾರೆ. ಈ ಕೃತಿಯು ಕಲಾವಿದರ ಗೌರವಾರ್ಹತೆಯನ್ನು ತೋರಿಸುತ್ತದೆ. ಈ ಕೃತಿಯು ಕನ್ನಡ ರಂಗಭೂಮಿಯ ಪ್ರಾಮಾಣಿಕ ದಾಖಲೆಯಾಗಿದೆ. ಗೊರೂರು ಅನಂತರಾಜು ಅವರು ಕೇವಲ ಕಲಾವಿದರನ್ನು ಪರಿಚಯಿಸುವ ಸಾಹಿತಿ ಮಾತ್ರವಲ್ಲ, ನಾಟಕದ ಕಲಾವಿದರ ಜೀವನವನ್ನೇ ಅರ್ಥಮಾಡಿಕೊಂಡ ಕಲಾವಿದರಾಗಿ ಈ ಕೃತಿಯಲ್ಲಿ ಸ್ಪಷ್ಟ ಚಿತ್ರಣ ನೀಡುತ್ತಾರೆ.
ಲೇಖಕರು ರಂಗಭೂಮಿಗೆ ತುಂಬಾ ಹತ್ತಿರವಾದ ವ್ಯಕ್ತಿಯಾಗಿರುವುದರಿಂದ ಕೆಲವೊಮ್ಮೆ ಭಾವನಾತ್ಮಕವಾಗಿ ಹೆಚ್ಚು ವಿವರಣೆಯನ್ನು ನೀಡಿರುವ ಸಂದರ್ಭಗಳಿವೆ. ಈ ಸಂದರ್ಭಗಳು ಕೃತಿಯ ನೈಜತೆಯನ್ನು ಹೆಚ್ಚಿಸುತ್ತವೆ. “ನಿಂತು ಹೋದ ರಂಗವೈಭವ” ಎಂಬ ಲೇಖನದಲ್ಲಿ ಕನ್ನಡ ರಂಗವೈಭವ ಪತ್ರಿಕೆಯ ಸಹ ಸಂಪಾದಕರನ್ನು ಪರಿಚಯಿಸಿಕೊಂಡು ರಂಗ ಪ್ರದರ್ಶನದ ಫೋಟೋ ತೆಗೆದು ಪತ್ರಿಕೆಗಳಿಗೆ ಪರಿಚಯಿಸಲು ಲೇಖನ ಬರೆಯುವುದಾಗಿ ಕೇಳಿಕೊಳ್ಳುತ್ತಾರೆ.
ಲೇಖನಗಳನ್ನು ಬರೆಯುವುದಾದರೆ ದಾವಣಗೆರೆಯಿಂದ ಪ್ರಕಟವಾಗುತ್ತಿದ್ದ ಕನ್ನಡ ರಂಗವೈಭವ ಪತ್ರಿಕೆಗೆ ಬರೆಯಲು ತಿಳಿಸುತ್ತಾರೆ. ಕೋವಿಡ್- 19ರ ಮೊದಲು ರಂಗಭೂಮಿ ಹೇಗಿತ್ತು?. ಕೋವಿಡ್ ಕಾಲದಲ್ಲಿ ಅದರ ಪರಿಸ್ಥಿತಿ ಏನಾಯಿತು ಮತ್ತು ಕೋವಿಡ್ ನಂತರ ಈಗಿನ ರಂಗಭೂಮಿ ಹೇಗಿದೆ. ಎಂಬ ವಿವರವನ್ನು ಮಾತನಾಡುತ್ತಾ, ಬಸವರಾಜ ಐರಣಿಯವರ ಕಲಾ ಸೇವೆಯ ಕುರಿತ ಲೇಖನ ಇದಾಗಿದೆ.
ಲೇಖಕರು “ನಿಂತು ಹೋದ” ಪತ್ರಿಕೆಯ ಜೊತೆಗೆ ರಂಗಭೂಮಿಯ ವ್ಯಾಪ್ತಿಯೂ ಕಡಿಮೆಯಾದ ಕುರಿತು ವಿವರವಾಗಿ ಬರೆದಿದ್ದಾರೆ. 2019 ರ ನಂತರ ಪತ್ರಿಕೆಯು ವಾರಕ್ಕೊಮ್ಮೆ ರಂಗಭೂಮಿ ಕಲಾವಿದರ ಕುರಿತು ಪರಿಚಯ ಮಾಡುತ್ತಾ ಬಂದಿದೆ. ಲೇಖಕರಾದ ಬಸವರಾಜ ಐರಣಿಯವರಿಗೆ ನಾಟಕ ಅಕಾಡೆಮಿ ಪ್ರಶಸ್ತಿ ತಂದು ಕೊಡುವವರೆಗೂ ವ್ಯಾಪಿಸಿದೆ ಎಂದ ಮೇಲೆ ಈ ಲೇಖನ ಎಷ್ಟೊಂದು ಮಹತ್ವ ಪಡೆದಿದೆ ಎಂದು ತಿಳಿಯುತ್ತದೆ.
ಎಸ್.ಎಸ್.ಎಲ್.ಸಿ ಓದಿದ ಐರಣಿಯವರು ಪ್ರಿಂಟಿಂಗ್ ಪ್ರೆಸ್ ಕೆಲಸಕ್ಕೆ ಸೇರಿಕೊಂಡು ನಂತರ ನಾಟಕದ ಪಾತ್ರಗಳನ್ನು ಬಯಸಿ ಬೆಳೆದು ಬಂದ ಬಗೆಯನ್ನು ತಿಳಿಸುತ್ತದೆ. ಲೇಖಕರ ಮತ್ತೊಂದು ಲೇಖನ ಗುಡಿಹಳ್ಳಿ ನಾಗರಾಜ್ ರವರ ನೆನಪು ಮಾಡಿಕೊಂಡು ಬರೆದಂತಹ ರಂಗಸೆಲೆ ಪುಸ್ತಕದಲ್ಲಿ ಪರಿಚಯಿಸಿರುವ ನಾಟಕ ಕಂಪನಿಗಳು ಹಾಗೂ ಪಾತ್ರವರ್ಗ ಹೇಗೆ ಜನಸಮೂಹದಲ್ಲಿ ಮೋಡಿ ಮಾಡಿತು.
ಗುಡಿಹಳ್ಳಿ ನಾಗರಾಜರವರು ಹೇಗೆ ಬರಹಗಾರರಾಗಿ, ನಿರ್ದೇಶಕರಾಗಿ, ನಟರಾಗಿ ಕಾದಂಬರಿಕಾರರಾಗಿ ಹೊರಹೊಮ್ಮಿದರು ಎಂಬುದನ್ನು ತಿಳಿಸುತ್ತದೆ. ಕನ್ನಡ ರಂಗಭೂಮಿಯ ಬಹಳಷ್ಟು ಜನರನ್ನು ಹೇಗೆ ಹೊರ ಜಗತ್ತಿಗೆ ಪರಿಚಯಿಸಿದರು ಎಂಬ ಮಾಹಿತಿ ಇಲ್ಲಿ ಲಭ್ಯವಾಗುತ್ತದೆ. ಹಾಸ್ಯ ಚಕ್ರವರ್ತಿ ನರಸಿಂಹರಾಜು ರಂಗಪಯಣ ಲೇಖನದಲ್ಲಿ ನರಸಿಂಹರಾಜುರವರು ಹೇಗೆ ನಾಟಕ ಕಂಪೆನಿಗೆ ಪ್ರವೇಶ ಪಡೆದರು. ಎಷ್ಟೆಲ್ಲಾ ನಾಟಕ ಕಂಪೆನಿಗಳನ್ನು ಬದಲಾಯಿಸಿದರು. ಕೊನೆಯಲ್ಲಿ ಗುಬ್ಬಿ ನಾಟಕ ಕಂಪೆನಿಯಲ್ಲಿ ನೆಲೆನಿಂತು ಚಿತ್ರರಂಗ ಪ್ರವೇಶಿಸಿದ ಬಗೆ ಎಲ್ಲವನ್ನು ವಿವರಣಾತ್ಮಕವಾಗಿ ಬರೆದಿದ್ದಾರೆ.
ಎರಡನೇ ಮಹಾಯುದ್ದದ ಬಿಸಿ ನಾಟಕ ಕಂಪನಿಗಳ ಮೇಲೆ ಋಣಾತ್ಮಕ ಪರಿಣಾಮ ಬೀರಿ, ಅಂದಿನ ಕಾಲಘಟ್ಟದಲ್ಲಿ ನಟರು, ನಿರ್ದೇಶಕರು ಅನುಭವಿಸಿದ ನೋವು, ದುಃಖ-ದುಮ್ಮಾನಗಳನ್ನು ತಮ್ಮ ಲೇಖನಿಯ ಮೂಲಕ ತಿಳಿಸಿದ್ದಾರೆ. ನರಸಿಂಹರಾಜು ಅವರು ಸಿನಿಮಾ ರಂಗದಲ್ಲಿದ್ದರೂ, ರಂಗಭೂಮಿ ಕರೆದಾಗ ಮತ್ತೆ ಬಂದು ಪಾತ್ರ ಮಾಡುತ್ತಿದ್ದರು ಎಂಬುದನ್ನು ಓದುಗರ ಮನ ಮುಟ್ಟುವಂತೆ ಹೇಳಿದ್ದಾರೆ.
ಗೊರೂರು ಜಾತ್ರೆಯ ಸಂದರ್ಭದಲ್ಲಿ ತಿಂಗಳಾನುಗಟ್ಟಲೆ ಬಂದು ಬೀಡುಬಿಡುತ್ತಿದ್ದ ಟೂರಿಂಗ್ ಟಾಕೀಸ್ ಗಳ ಬಗ್ಗೆ ಮರೆಯದೇ ಹೇಳಿರುವುದು ತನ್ನ ಊರು ಗೊರೂರು ಒಂದೊಮ್ಮೆ ಹೇಗೆ ರಂಗಭೂಮಿಯ ನೆಲೆಯಾಗಿತ್ತು ಎಂಬುದನ್ನು ವಿವರಿಸಿದ್ದಾರೆ. ನರಸಿಂಹರಾಜುರವರ ರಂಗಪಯಣ ಸಾಗಿದ ರೀತಿಯನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ.
ಲೇಖಕರಾದ ಗೊರೂರು ಅನಂತರಾಜು ರವರು ಬರೆದಿರುವ ಮತ್ತೊಂದು ಲೇಖನದಲ್ಲಿ ರಂಗಗೀತೆಗಳ ಸಾರ್ವಭೌಮ ಎಂದೇ ಪ್ರಸಿದ್ಧರಾದ ಆರ್. ಪರಮಶಿವನ್ ರವರು ಬಡ ಕುಟುಂಬದಲ್ಲಿ ಹುಟ್ಟಿ, ಊಟಕ್ಕೂ ಗತಿಯಿಲ್ಲದ ದಿನಗಳಲ್ಲಿ ಸೋದರ ಮಾವನ ಭಿಕ್ಷಾನ್ನದಿಂದ ಒಂದು ಹೊತ್ತು ಉಂಡು ನಾಲ್ಕು ವರ್ಷಗಳು ಕಳೆದರು. ನಂತರವಷ್ಟೇ ಚಾಮುಂಡೇಶ್ವರಿ ಕಂಪೆನಿಯ ವಸಂತಸೇನ ನಾಟಕದ ಮೂಲಕ ರಂಗಭೂಮಿ ಪ್ರವೇಶಿಸಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಎದುರಿನಲ್ಲಿ ಅಭಿನಯಿಸಿ ಮೆಚ್ಚುಗೆ ಪಡೆದದನ್ನು ತನ್ನ ಆತ್ಮಕಥೆಯಲ್ಲಿ ನಿವೇದಿಸುತ್ತಾರೆ. ಆರ್. ಪರಮಶಿವನ್ ಅಲ್ಲದೇ 1940 ರ ಸುಮಾರಿಗೆ ಗುಬ್ಬಿ ವೀರಣ್ಣನವರು ತೆಗೆದ ಸುಭದ್ರ ಚಿತ್ರದಲ್ಲಿ ಒಂದು ಹಾಡು, ದೃಶ್ಯ ವೀರಣ್ಣನವರ ಜೊತೆಯಲ್ಲಿ ಅಭಿನಯಿಸಲು ಸಿಕ್ಕ ಅವಕಾಶವನ್ನು ನೆನಪು ಮಾಡಿಕೊಳ್ಳುತ್ತಾರೆ.
ಹೊಳೆನರಸೀಪುರಕ್ಕೆ ನಾಟಕ ನೋಡಲು ಹೋದಾಗ ಹಾರ್ಮೋನಿಯಂ ಮಾಸ್ಟರ್ ಈಗ ಬರುತ್ತೇನೆಂದು ಹೇಳಿ ಹೋದವರು ಮತ್ತೆ ಎಷ್ಟು ಹೊತ್ತಾದರೂ ಬರಲಿಲ್ಲ ಅದನ್ನು ಮುಂದುವರಿಸುವ ಕಾರ್ಯ ಪರಮಶಿವನ್ ರವರಿಗೆ ಕೊಟ್ಟಿದ್ದರು. ಕೇವಲ ಹದಿನೆಂಟು ವರ್ಷದ ಹುಡುಗ ಪರಮಶಿವನ್ ಅದನ್ನು ಸುಸೂತ್ರವಾಗಿ ಹಾರ್ಮೋನಿಯಂ ವಾದಕರಾಗಿ ನಿರ್ವಹಣೆ ಮಾಡಿದರು ಎಂಬುದನ್ನು ನೆನಪಿಸಿಕೊಳ್ಳುತ್ತಾರೆ.
ಅಂದಿನ ಕಾಲದಲ್ಲಿ ನಾಟಕ ಕಂಪೆನಿಗಳು ಹೇಗೆ ಊರಿಂದೂರಿಗೆ ವಲಸೆ ಹೋಗುತ್ತಿದ್ದವು. ಅಲ್ಲಿಯ ಪರಿಸ್ಥಿತಿಗೆ ಅನುಗುಣವಾಗಿ ಹೊಂದಿಕೊಂಡು ಬದುಕುವ ಸನ್ನಿವೇಶ ಎಲ್ಲವನ್ನು ಕಟ್ಟಿಕೊಡುತ್ತಾರೆ. ನಾಟಕಗಳ ಜೀವಾಳವೇ ರಂಗಗೀತೆಗಳು, ಅವುಗಳನ್ನು ಬರೆಯುವುದು ಮತ್ತು ಹಾಡುವುದರಲ್ಲಿ ಪರಮಶಿವನ್ ರವರು ಸದಾ ಮುಂದಿರುತ್ತಾರೆ ಎಂಬುದನ್ನು ಮನಮುಟ್ಟುವಂತೆ ವರ್ಣಿಸಿದ್ದಾರೆ.
ಈ ಕೃತಿಯಲ್ಲಿ ಪೌರಾಣಿಕ ನಾಟಕ ವಿದ್ವಾನ್ ಕಿರಗಸೂರು ರಾಜಪ್ಪನವರ ಕುರಿತು, ಸೃಜನಶೀಲ ನಿರ್ದೇಶಕಿ ಮಂಗಳಾ ವೆಂಕಟೇಶ್, ರಂಗ ಸಂಗೀತಕ್ಕೆ ಹನ್ಯಾಳು ಗೋವಿಂದೇಗೌಡರ ಕೊಡುಗೆಗಳು, ಗವೇನಹಳ್ಳಿ ಜಿ. ಎಂ. ಪ್ರದೀಪ್, ಕಟ್ಟೆ ಎಂ. ಎಸ್. ಕೃಷ್ಣಸ್ವಾಮಿ, ಹಳೇಬೀಡು ಕುಳ್ಳೇಗೌಡರು, ಬಂಡಿಹಳ್ಳಿ ನಾಗರಾಜ, ಪೌರಾಣಿಕ ರಂಗ ಸಂಗೀತ ಸಾಧಕರಾದ ಹೆಚ್. ಜಿ. ಶಿವಲಿಂಗಮೂರ್ತಿ.
ಲೇಖಕರ ರಂಗ ಸಿರಿ ಕಥಾ ಐಸಿರಿ ಕುರಿತು ಡಾ. ಸುಧಾ ಹೆಚ್. ಎಸ್ ಧಾರವಾಡ ಬರೆದ ರಂಗಭೂಮಿ ಒಳ ಹೊರಗಿನ ಹೂರಣ ವಿಮರ್ಶಾ ಬರಹ, ಅಂತೆಯೇ ಗೊರೂರು ಅನಂತರಾಜು ರವರು ನಟ, ನಾಟಕಕಾರರು ಎಸ್. ಎಸ್. ಪುಟ್ಟೇಗೌಡರ ಕನಕದಾಸರ ಜೀವನಾಧಾರಿತ ನಾಟಕ ಕೃತಿ ಮಹಾತ್ಮ ಕನಕದಾಸ ಕೃತಿ ವಿಮರ್ಶೆ, ಹಾಗೆಯೇ ಡಾ. ಬರಾಳು ಶಿವರಾಮ್ ರವರ ರಂಗವೈಭವ ಕೃತಿಯ ಪರಿಚಯ ಮುಂತಾದ ವಿಚಾರಗಳು ಸ್ಪಷ್ಟವಾಗಿ ವಿಭಿನ್ನ ದೃಷ್ಟಿಕೋನಗಳಲ್ಲಿ ಗೋಚರವಾಗತ್ತವೆ.
ಈ ಕೃತಿಗೆ ಡಾ. ಬರಾಳು ಶಿವರಾಮ್ ಮುನ್ನುಡಿಯನ್ನು ಬರೆದಿದ್ದು, ಬೆನ್ನುಡಿಯನ್ನು ಜಿ. ಎಸ್. ಪ್ರಕಾಶ್ ಬರೆದಿದ್ದಾರೆ. ಈ ಭಾಗಗಳು ಓದುಗರಿಗೆ ಗ್ರಂಥದ ಸಾರವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ನೆರವಾಗುತ್ತದೆ. “ನಿಂತು ಹೋದ ಕನ್ನಡ ರಂಗವೈಭವ” ಕೃತಿಯು ಕನ್ನಡ ರಂಗಭೂಮಿಗೆ ಸಮರ್ಪಿತವಾದ ಬೌದ್ಧಿಕ ಚಿಂತನೆ ಹಾಗೂ ಮನನಕ್ಕೆ ಕಾರಣವಾಗುವ ವಿಶ್ಲೇಷಣಾತ್ಮಕ ದಾಖಲೆ.
ಗೊರೂರು ಅನಂತರಾಜು ಅವರು ಈ ಕೃತಿಯಲ್ಲಿ ಕನ್ನಡ ರಂಗಭೂಮಿ ಬದುಕು, ವೈಭವ, ಪತನ ಮತ್ತು ಸಾಧ್ಯತೆಯ ಬಗೆಗಿನ ಸತ್ಯವನ್ನು ನಿರ್ಭಯವಾಗಿ ಅನಾವರಣಗೊಳಿಸಿದ್ದಾರೆ. ಅವರು “ನಿಂತು ಹೋದ ಕನ್ನಡ ರಂಗಭೂಮಿ” ಯಲ್ಲಿ ವಿಭಿನ್ನ ಕಲಾವಿದರ ಬದುಕಿನ ಅನುಭವ, ವೈಚಾರಿಕತೆ ಮತ್ತು ನಿಷ್ಠೆಯ ಭಾವದಿಂದ ವ್ಯಕ್ತಪಡಿಸಿರುತ್ತಾರೆ. ಇವರ ಈ ಕೃತಿಯು ಕನ್ನಡ ರಂಗಭೂಮಿಯನ್ನು ಜನಮಾನಸ ಲೋಕಕ್ಕೆ ತಲುಪಿಸುವಲ್ಲಿ ಸಹಕಾರಿಯಾಗಿದೆ.
ಕೆ. ಎನ್. ಚಿದಾನಂದ, ಸಾಹಿತಿ, ಹಾಸನ