ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಕೆಬ್ಬೇಪುರದ ಆರ್. ಸಿದ್ಧರಾಜು ಅವರು ಪ್ರಸಿದ್ಧ ತಂಬೂರಿ ಪದ ಕಲಾವಿದರಾಗಿದ್ದಾರೆ.
ಇವರು ರಾತ್ರಿಯಿಡೀ ತಂಬೂರಿ ನುಡಿಸಿ ಜನಪದ ಕಾವ್ಯಗಳನ್ನು ಹಾಡುವ ಅಪಾರ ಪ್ರತಿಭೆ ಹೊಂದಿರುವ ಕಲಾವಿದರು.
ತಂದೆ ದಿವಂಗತ ಕೆ.ಬಿ.ರಾಚಯ್ಯ ಆಕಾಶವಾಣಿಯ ಎ-ಗ್ರೇಡ್ ಜನಪದ ಕಲಾವಿದರಾಗಿದ್ದರು. ಹಾಡುಗಾರಿಕೆಯ ಕಲೆಯನ್ನು ತಂದೆಯಿಂದಲೇ ಇವರು ಸಂಪಾದಿಸಿದ್ದಾರೆ.
ಇವರು ಕೂಡ ಆಕಾಶವಾಣಿಯಲ್ಲಿ ಎ-ಗ್ರೇಡ್ ಕಲಾವಿದರಾಗಿದ್ದಾರೆ. ೪೨ ವರ್ಷಗಳಿಂದ ಮೃತರ ಸ್ಮರಣೆ, ಸಾಂಸ್ಕೃತಿಕ ಕಾರ್ಯಕ್ರಮ, ಜಾತ್ರೆ, ಉತ್ಸವಗಳಲ್ಲಿ ತಂಬೂರಿ ಪದಗಳನ್ನು ಹಾಡಿ ಜನರ ಮನ ಗೆದ್ದಿದ್ದಾರೆ.
ಇವರು ಕೇವಲ ೩ನೇ ತರಗತಿ ವ್ಯಾಸಂಗ ಹೊಂದಿದ್ದರೂ ಜನಪದ ಸಾಹಿತ್ಯದಲ್ಲಿ ಪುಸ್ತಕಕ್ಕಿಂತಲೂ ಹೆಚ್ಚಿನ ತಿಳುವಳಿಕೆ ಹೊಂದಿದ್ದಾರೆ.
ಸಿದ್ದರಾಜು ಸುಮಾರು ೧೫ಕ್ಕೂ ಹೆಚ್ಚು ಜನಪದ ಕಥೆಗಳನ್ನು ತಂಬೂರಿಯೊಂದಿಗೆ ಸುಶ್ರಾವ್ಯವಾಗಿ ಹಾಡುತ್ತಾರೆ.
ಇವರು ಹಾಡಿಕೊಂಡು ಬಂದಿರುವ ಕಥೆಗಳು ಮಂಟೇಸ್ವಾಮಿ ತಂಬೂರಿ ಕಥೆ, ರಾಜ ಸತ್ಯವ್ರತ, ಬಣಜಿ ಹೊನ್ನಮ್ಮ, ದೊಡ್ಡಬಸವಣ್ಣನ ಕತೆ, ಅಣ್ಣತಂಗಿ ಕಥೆ, ನಲ್ಲತಂಗಿ ಕಥೆ, ಕುಂತಿ ಪದ, ಮುಡುಕುತೊರೆ ಮಲ್ಲಪ್ಪ, ಅರ್ಜುನ ಜೋಗಿ, ಬಾಲ್ನಾಗಮ್ಮ, ಮೈದಾಲರಾಮ, ನಿಂಗರಾಜಮ್ಮ. ಚೆನ್ನಿಗರಾಯ, ಕಾಳಿಂಗರಾಜನ ಕಥೆ ಪಿರಿಯಾಪಟ್ಟಣ ಕಾಳಗ.
ಅವರು ಹಾಡುವಾಗ ತಾಳ, ತಂಬೂರಿ, ಡಿಕ್ಕಿ, ದಂಬ್ಡಿ, ಕಂಬ್ಚಿ, ಚಿಟಗದಾಳ ಮುಂತಾದ ತಂತ್ರೋಪಕರಣಗಳನ್ನು ಬಳಸುತ್ತಾರೆ. ಇವುಗಳಲ್ಲಿ ಸೃಜನಶೀಲ ರಾಗ-ತಾಳ ಜೋಡಣೆ ಮೂಲಕ ಹಾಡುಗಳನ್ನು ಅತ್ಯಂತ ಸುಂದರವಾಗಿ ನಿರ್ವಹಿಸುತ್ತಾರೆ.
ಪಿ. ನಾಗರತ್ನಮ್ಮ ಮಳವಳ್ಳಿ ಸಂಪಾದಿತ “ಮಂಟೇಸ್ವಾಮಿ ಜನಪದ ಕಾವ್ಯ” ಕೃತಿಗೆ ಸಿದ್ಧರಾಜು ಹಾಡಿ ಸಹಕಾರ ನೀಡಿದ್ದಾರೆ. ಈ ಕೃತಿಯಲ್ಲಿ ಮಂಟೇಸ್ವಾಮಿ ಅವರ ಜೀವನದ ಪ್ರತಿಯೊಂದು ಘಟನೆಗೆ ಪದ ಕಟ್ಟಿ ಹಾಡಲಾಗಿದೆ.
ಧರೆ ಕಂಡ ಧರ್ಮಗುರು ಪುಸ್ತಕದ ಸ್ಥಳ ಮಾಹಿತಿಗೆ ರಾಗ ಜೋಡಿಸಿ ಹಾಡಿದ ವಿಚಾರವನ್ನು ಪಿ. ನಾಗರತ್ನಮ್ಮ ಶ್ಲಾಘಿಸಿದ್ದಾರೆ. ಅವರು ಕಲಾವಿದನ ಚತುರತೆಯನ್ನು ಪ್ರಶಂಸಿಸಿದ್ದಾರೆ.
ಹಿಮ್ಮೇಳ ಕಲಾವಿದರಾಗಿ ನೀಲಿಸಿದ್ದಯ್ಯ ಮತ್ತು ರಾಚಯ್ಯ ಕೂಡ ರಾಗಪೂರ್ಣ ಗಾನದಲ್ಲಿ ಭಾಗವಹಿಸುತ್ತಾರೆ. ಇವರು ಸಹ ತಂಬೂರಿಗಾನದಲ್ಲಿ ಬಹುಮಟ್ಟಿಗೆ ಪರಿಣಿತರಾಗಿದ್ದಾರೆ.
2023ರ ಮಾರ್ಚ್ 13ರಂದು ಗುಂಡ್ಲುಪೇಟೆ ಶಿಕ್ಷಕರ ಭವನದಲ್ಲಿ ಮಂಟೇಸ್ವಾಮಿ ಕೃತಿ ಬಿಡುಗಡೆ ಸಮಾರಂಭದಲ್ಲಿ ಇವರಿಗೆ ಸನ್ಮಾನ ಸಲ್ಲಿಸಲಾಗಿದೆ. ಈ ಕಾರ್ಯಕ್ರಮವನ್ನು ತಾಲ್ಲೂಕು ಕಸಾಪ ಮತ್ತು ಮಳವಳ್ಳಿ ಸುಂದರಮ್ಮ ಸಾಂಸ್ಕೃತಿಕ ವೇದಿಕೆಯಿಂದ ಆಯೋಜಿಸಲಾಗಿತ್ತು.
2016ರಲ್ಲಿ ಸವಣೂರಿನ ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳ ಜಾನಪದ ಉತ್ಸವದಲ್ಲಿ ಇವರಿಗೆ ಕಲಾರಶ್ಮಿ ಸಮ್ಮಾನ ಲಭಿಸಿದೆ.
2022ರಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಮಂಟೇಸ್ವಾಮಿ ನೀಲಗಾರ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.
ಅದೇ ವರ್ಷ ಮಳವಳ್ಳಿಯ ಮಂಟೇಸ್ವಾಮಿ ಮಠ ಕಪ್ಪಡಿ ಜಾತ್ರೆಯಲ್ಲಿಯೂ ಪ್ರಶಸ್ತಿ ಪತ್ರ ಲಭಿಸಿದೆ. ಕರ್ನಾಟಕ ಜಾನಪದ ಅಕಾಡೆಮಿ 2025ರ ಮಾರ್ಚ್ 15ರಂದು ಬೀದರ್‌ನಲ್ಲಿ ವಾರ್ಷಿಕ ಪ್ರಶಸ್ತಿ ನೀಡಿ ಸನ್ಮಾನಿಸಿದೆ.
“ಇಷ್ಟವರೆಗೆ ಎಷ್ಟು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೀರಿ?” ಎಂಬ ಪ್ರಶ್ನೆಗೆ ಅವರು, “ಸುಮಾರು ಐದು ಸಾವಿರ ಆಗಬಹುದು” ಎಂದು ಉತ್ತರಿಸಿದರು.
ಇವರು ಈ ವರ್ಷ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಹಾಕಲಿದ್ದಾರೆ, ಅವರಿಗೆ ನಮ್ಮೆಲ್ಲರ ಪುರಸ್ಕಾರವಾಗಲಿ.
ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.