ಕಳೆದ 12 ವರ್ಷಗಳಿಂದ ದಾವಣಗೆರೆಯಲ್ಲಿ ನಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದೇನೆ.
ಜಾನಪದ ಗೀತೆ ವೈಯಕ್ತಿಕ ಮತ್ತು ಸಮೂಹ ಗಾಯನ ವಿಭಾಗದಲ್ಲಿ ಪ್ರಥಮ ಬಹುಮಾನ ಗಳಿಸಿದ್ದು, ಹಿಂದೂಸ್ತಾನಿ ಲಘು ಸಂಗೀತದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದೇನೆ.
ಕರ್ನಾಟಕ ಶಾಸ್ತ್ರೀಯ ಲಘು ಸಂಗೀತದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಕಲಾ ಪ್ರೀತಿಗೆ ಮತ್ತಷ್ಟು ಬೆಳಕು ಹರಿಸಿದ್ದೇನೆ.
ಇಂತಹ ವೈವಿಧ್ಯಮಯ ಪ್ರತಿಭೆ ಹೊಂದಿರುವ ವ್ಯಕ್ತಿ ನಾಗರಕಟ್ಟೆಯ ಸಿ. ಹನುಮಂತನಾಯ್ಕ, ಪ್ರಸ್ತುತ ದಾವಣಗೆರೆಯ ದುಗ್ಗಮ್ಮಪೇಟೆಯ ಸರ್ಕಾರಿ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿದ್ದಾರೆ.
ಇವರು ಮೂರು ಬಾರಿ ರಾಜ್ಯ ಪ್ರಶಸ್ತಿ ಪಡೆದಿರುವುದರ ಜೊತೆಗೆ ಅಂಗವಿಕಲರ ರಾಜ್ಯ ಮಟ್ಟದ ಪ್ರಬಂಧ ಹಾಗೂ ಗಾಯನ ಸ್ಪರ್ಧೆಯಲ್ಲಿಯೂ ಪ್ರಥಮ ಸ್ಥಾನ ಪಡೆದಿದ್ದಾರೆ.
ಹುಟ್ಟಿದ 14 ತಿಂಗಳ ನಂತರ ಪೋಲಿಯೋ ರೋಗದಿಂದ ವಿಕಲಚೇತನರಾದ ಇವರು ತಂದೆ ಚಂದ್ರನಾಯ್ಕ ಅವರಿಂದ ಪ್ರೇರಣೆಯುಂಟಾಯಿತು ಎಂದು ಕೃತಜ್ಞತಾಪೂರ್ವಕವಾಗಿ ನೆನಪಿಸುತ್ತಾರೆ.
ತಾಯಿ ಪುಟ್ಟಿಬಾಯಿ, ಪತ್ನಿ ಪವಿತ್ರಾ, ಮಗ ವಿಕ್ರಮ್ ನಾಯ್ಕ ಹಾಗೂ ಮಗಳು ದ್ರುವೀಕ ಅವರ ಪ್ರೀತಿಯ ಕುಟುಂಬವಾಗಿದೆ.
ಇವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ನಾಗರಕಟ್ಟೆಯಲ್ಲಿಯೇ ಮುಗಿಸಿ, ದಾವಣಗೆರೆಯ ಮೋತಿಯಪ್ಪ ಕಾಲೇಜಿನಲ್ಲಿ ಪಿಯುಸಿ ಪೂರ್ಣಗೊಳಿಸಿದರು.
ಡಿ.ಎಡ್ ತರಬೇತಿಯನ್ನು ತುಮಕೂರಿನ ಚಿಕ್ಕನಹಳ್ಳಿ ಸರ್ಕಾರಿ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಪಡೆದು, ಧಾರವಾಡದಿಂದ ಬಿಎ, ಇಗ್ನೋದಿಂದ ಬಿ.ಎಡ್ ಮಾಡಿದ್ದಾರೆ.
ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ ಪದವಿಯನ್ನು ಪಡೆದಿರುವ ಇವರು, 2010ರಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಶಿಕ್ಷಕರ ಹುದ್ದೆಗೆ ಆಯ್ಕೆಯಾದರು.
ಬಾಲ್ಯದಲ್ಲಿಯೇ ತಂದೆ ಹಾಡುತ್ತಿದ್ದ ಲಾವಣಿ, ಕೋಲಾಟ, ಭಜನೆ ಪದಗಳು ಇವರಿಗೆ ಸಂಗೀತದ ಪ್ರೇರಣೆಯಾಗಿದ್ದು, 4ನೇ ತರಗತಿಯಿಂದ ಹಾಡುಗಳನ್ನು ಹಾಡತೊಡಗಿದರು.
ಇವರೆಲ್ಲಾ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ 130ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಗಳಿಸಿರುವ ಗಾನಕೋಗಿಲೆ. ಅವರಿಗೆ ‘ಕಲಾ ವಿಭೂಷಣ’, ‘ಶಿಕ್ಷಣ ಸೌರಭ’ ಪ್ರಶಸ್ತಿಗಳು ಲಭಿಸಿವೆ.
ಇವರ ಮತ್ತೊಂದು ವಿಶೇಷತೆ ಎಂದರೆ ಗಂಡು ಹಾಗೂ ಹೆಣ್ಣು ಧ್ವನಿಯಲ್ಲಿ ಹಾಡಬಹುದಾದ ಅಪರೂಪದ ಪ್ರತಿಭೆ. ಮಕ್ಕಳಿಗೂ ಈ ಕಲೆಯನ್ನು ಧಾರೆಯೆರೆಯುತ್ತಿದ್ದಾರೆ.
ಕೊರೊನಾ ಸಂದರ್ಭದಲ್ಲಿ ತ್ರಿಚಕ್ರ ವಾಹನದಲ್ಲಿ ಆಹಾರ ಪೊಟ್ಟಣಗಳನ್ನು ವಿತರಿಸುವ ಮೂಲಕ ಇವರು ಸಾಮಾಜಿಕ ಕಳಕಳಿಯನ್ನು ಸಹ ವ್ಯಕ್ತಪಡಿಸಿದ್ದಾರೆ.
ಇವರು ಕರ್ನಾಟಕ ರಾಜ್ಯ ಬರಹಗಾರರ ಸಂಘದ (ರಿ.) ಹೂವಿನಹಡಗಲಿ ಘಟಕದ ಅಧ್ಯಕ್ಷ ಮಧುನಾಯ್ಕ್ ಲಂಬಾಣಿ ಅವರು ಆಯೋಜಿಸಿದ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಚಿಕ್ಕಮಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಗಾಯನ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಹಾಡಿ “ಕರ್ನಾಟಕ ಕರುನಾಡ ಕೋಗಿಲೆ” ಪ್ರಶಸ್ತಿಗೆ ಪಾತ್ರರಾದರು.
ಈ ಕಾರ್ಯಕ್ರಮದಲ್ಲಿ ಅವರು ಹಾಡಿದ ಕರೋಕೆ ಗೀತೆಯನ್ನು ತೀರ್ಪುಗಾರನಾಗಿ ನಾನು ಆಲಿಸಿದ್ದು, ಅವರ ಸಾಮೂಹಿಕ ನಾಡಗೀತೆ ವಿಶೇಷವಾಗಿ ಗಮನಸೆಳೆದಿತು.
“ಹತ್ತನೇ ವಯಸ್ಸಿನಿಂದಲೇ ನಾನು ಜಾನಪದ, ಭಾವಗೀತೆ, ಲಾವಣಿ, ಚಿತ್ರಗೀತೆಗಳನ್ನೇ ಹಾಡುತ್ತಾ ಕಲಿಸುತ್ತಾ ಬಂದಿದ್ದೇನೆ ಸಾರ್,” ಎನ್ನುತ್ತಾರೆ ಅವರು.
“ನಮ್ಮ ಶಾಲೆಯ ಎರಡನೇ ತರಗತಿಯ ಮಕ್ಕಳು ನಾಡಗೀತೆಗಳನ್ನು ಕರೋಕೆಯೊಂದಿಗೆ ತುಂಬಾ ಸೊಗಸಾಗಿ ಹಾಡುತ್ತಾರೆ ಸಾರ್,” ಎಂದು ಸಂತೋಷದಿಂದ ಹೇಳುತ್ತಾರೆ.
“ವಿಕಲಚೇತನ ಎಂದು ಕೆಲವೊಮ್ಮೆ ಮನಸ್ಸಿಗೆ ನೋವಾಗುತ್ತದೆ. ಆಗ ಎರಡು ಹಾಡುಗಳನ್ನು ಹಾಡಿ ತೃಪ್ತಿಪಟ್ಟುಕೊಳ್ಳುತ್ತೇನೆ,” ಎನ್ನುತ್ತಾರೆ ಅವರು ಭಾವೋದ್ರೇಕದಿಂದ.
“ನನ್ನ ಮನಸ್ಸು, ಹೃದಯ ಹರ್ಷಗೊಳ್ಳುತ್ತದೆ. ನೋವು ಮರೆತುಹೋಗುತ್ತದೆ. ನಿಜಕ್ಕೂ ಸಂಗೀತವೇ ನನ್ನ ಉಸಿರು,” ಎಂದು ಕಣ್ಣೀರಿನಿಂದ ಅನುಭವಗಳನ್ನು ಹಂಚಿಕೊಳ್ಳುತ್ತಾರೆ.
ಗೊರೂರು ಅನಂತರಾಜು, ಹಾಸನ.
9449462879
ವಿಳಾಸ :ಹುಣಸಿನಕೆರೆ ಬಡಾವಣೆ,
29ನೇ ವಾಡ್೬, 3ನೇ ಕ್ರಾಸ್,
ಶ್ರೀ ಶನೀಶ್ವರ ದೇವಸ್ಥಾನ ರಸ್ತೆ,
ಹಾಸನ-573201