ಗಂಗಾವತಿ: ಇಂದು ಜುಲೈ-೯ ಶನಿವಾರ ಶ್ರೀಮತಿ ಈರಮ್ಮ ಸಿದ್ದಪ್ಪ ಸಿದ್ದಾಪುರ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಗಂಡುಗಲಿ ಕುಮಾರರಾಮನ ಜಯಂತಿಯನ್ನು ಆಚರಿಸಲಾಯಿತು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಗಂಗಾವತಿ ಸಮಿತಿಯ ವತಿಯಿಂದ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ, ವಿದ್ಯಾರ್ಥಿಗಳು ಮತ್ತು ಪದಾಧಿಕಾರಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು .
ಜಯಂತಿಯ ಅಂಗವಾಗಿ, ಶ್ರೀ ಸೋಮನಾಥ ಎಸ್. ಹೆಬ್ಬಡದ ಅವರು ಗಂಡುಗಲಿ ಕುಮಾರರಾಮನ ಇತಿಹಾಸ ಹಾಗೂ ಅವನ ಶೌರ್ಯ, ಸಾಹಸ, ಅಪ್ರತಿಮ ಹೋರಾಟ ಮನೋಭಾವ ಕುರಿತು ಉಪನ್ಯಾಸ ನೀಡಿದರು.
ಅವರು ಕುಮಾರರಾಮನ ತ್ಯಾಗ ಬಲಿದಾನದ ಬಗ್ಗೆ ಹಾಗೂ ಸದ್ಗುಣಗಳ ಕಾರಣದಿಂದ ಇಂದಿಗೂ ಜನಮಾನಸದಲ್ಲಿ ಬೇರೂರಿದ್ದು, ಇಂದಿಗೂ ಆತನನ್ನು ಪೂಜಿಸಲಾಗುತ್ತಿದೆ ಎಂದು ವಿವರಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಪ್ರಾಂತ ಕಾರ್ಯಕಾರಣಿ ಮಂಡಳಿಯ ಸದಸ್ಯರಾದ ಅಶೋಕ್ ರಾಯಕರ್, ಇತಿಹಾಸವನ್ನು ತಿರುಚುವ ಅಪಾಯದ ಬಗ್ಗೆ ಎಚ್ಚರಿಸಿದರು.
ಮೈಸೂರಿನ ಕನ್ನಂಬಾಡಿ ಕಟ್ಟೆಯ ಇತಿಹಾಸವನ್ನು ತಪ್ಪಾಗಿ ಜನರಿಗೆ ತಿಳಿಸುವ ಷಡ್ಯಂತ್ರ ನಡೆಯುತ್ತಿದೆ ಎಂಬುದನ್ನು ಅವರು ಉದಾಹರಣೆಯಾಗಿ ಉಲ್ಲೇಖಿಸಿದರು.
ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಡಾ|| ಮಾನಸ ಡಿ.ಎ. ಅವರು, ವಿದ್ಯಾರ್ಥಿಗಳಿಗೆ ಹೋರಾಟಗಾರರ ಜೀವನ ಚರಿತ್ರೆ ಪರಿಚಯಿಸುವ ಪರಿಷತ್ತಿನ ಪ್ರಯತ್ನಕ್ಕೆ ಧನ್ಯವಾದ ಅರ್ಪಿಸಿದರು.
ಅವರು ಈ ಕಾರ್ಯಕ್ರಮಗಳು ಯುವಕರಲ್ಲಿ ದೇಶಭಕ್ತಿ ಮತ್ತು ಸಂಸ್ಕೃತಿ ಅರಿವು ಬೆಳೆಸಲು ಸಹಾಯ ಮಾಡುತ್ತವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಯಂಕಪ್ಪ ಕಟ್ಟಿಮಣಿ, ರಾಜೇಶ್ ನಾಯಕ್ ದೊರೆ ಮತ್ತು ಹರನಾಯಕ ಉಪಸ್ಥಿತರಿದ್ದು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಅವರು ಗಂಡುಗಲಿ ಕುಮಾರರಾಮನ ಹೋರಾಟ ಇಂದಿನ ಪೀಳಿಗೆಗೆ ಪ್ರೇರಣೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಅಧ್ಯಕ್ಷ ಎನ್. ಜಡೆಪ್ಪ ಮೆಟ್ರಿ, ಯುವಕರು ದುಶ್ಚಟಗಳಿಂದ ದೂರವಿದ್ದು ದೇಶದ ಗರಿಮೆ ಉಳಿಸಿ ಬೆಳೆಸುವ ಕಾಯಕದಲ್ಲಿ ನಿರತರಾಗಬೇಕು ಎಂದು ಕರೆ ನೀಡಿದರು.
ಅವರು ಸಾಹಿತ್ಯ ಮತ್ತು ಸಂಸ್ಕೃತಿ ರಕ್ಷಣೆಯಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಮಹತ್ತರ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಕುಮಾರಿ ಸೌಮ್ಯ ನಿರ್ವಹಿಸಿದರು, ಶ್ರೀ ಮಹದೇವ್ ಮೋಟಿ ಅವರು ಕಾರ್ಗಿಲ್ ಯೋಧರಿಗೆ ನಮನ ಸಲ್ಲಿಸುವ ದೇಶಭಕ್ತಿ ಗೀತೆ ಹಾಡಿದರು.
ಸ್ವಾಗತವನ್ನು ಯಲ್ಲಪ್ಪ ಕಲಾಲ್ ಮಾಡಿದರು. ವಂದನಾರ್ಪಣೆಯನ್ನು ಬಳ್ಳಾರಿ ವಿಭಾಗಿಯ ಸಂಯೋಜಕರಾದ ಶ್ರೀಧರ್. ಟಿ ಸಲ್ಲಿಸಿ ಶಾಂತಿ ಮಂತ್ರ ಪಠಿಸಿದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ಪದಾಧಿಕಾರಿಗಳಾದ ಪ್ರಕಾಶ್ ಪಾಟೀಲ್, ಶಿವನಗೌಡ ತೆಗ್ಗಿ, ಶ್ರವಣಕುಮಾರ ರಾಯಕರ್, ಉಪನ್ಯಾಸಕರಾದ ಬಾಳಪ್ಪ, ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.