ಗಂಗಾವತಿ: ನಿನ್ನೆ ಬೆಂಗಳೂರು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಪುರಾತತ್ವ ಹಾಗೂ ಪ್ರವಾಸೋದ್ಯಮ ಇಲಾಖೆಗಳು ಏರ್ಪಡಿಸಿದ್ದ ಹಿರೇಬೆಣಕಲ್ಲಿನ ಶಿಲಾಸಮಾಧಿಗಳ ಮತ್ತು ಗವಿಚಿತ್ರಗಳ ಛಾಯಾಚಿತ್ರ ಪ್ರದರ್ಶನವನ್ನು ಮಾನ್ಯ ಮುಖ್ಯ ಮಂತ್ರಿಗಳು ಉದ್ಘಾಟಿಸಿದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸೇರಿ ಹಲವಾರು ಮಂತ್ರಿಗಳು, ಶಾಸಕರು, ಅಧಿಕಾರಿಗಳು ಪ್ರದರ್ಶನ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಗಂಗಾವತಿ ಚಾರಣ ಬಳಗದ ಮಾರ್ಗದರ್ಶಕರು ಹಾಗೂ ಇತಿಹಾಸ ಸಂಶೋಧಕರಾದ ಡಾ. ಶರಣಬಸಪ್ಪ ಕೋಲ್ಕಾರ ಪ್ರಕಟಣೆಯಲ್ಲಿ ಸಂತಸ ಹಂಚಿಕೊಂಡರು.
ಪ್ರವಾಸೋದ್ಯಮ ಮಂತ್ರಿಗಳಾದ ಎಚ್.ಕೆ. ಪಾಟೀಲ ಅವರು ಇತ್ತೀಚೆಗೆ ಬೆಣಕಲ್ ಗ್ರಾಮಕ್ಕೆ ಭೇಟಿ ಕೊಟ್ಟು ಅಲ್ಲಿಯ ಪ್ರಾಗೈತಿಹಾಸಿಕ ಸ್ಮಾರಕಗಳ ಬಗ್ಗೆ ಮಾಹಿತಿ ಪಡೆದಿದ್ದರು.
ಅದರ ಬಗ್ಗೆ ವಿಧಾನಸಭೆ ಪ್ರಶ್ನೋತ್ತರ ವೇಳೆ ಚರ್ಚೆ ನಡೆದು ನಾಡಿನ ಗಮನ ಸೆಳೆದಿತ್ತು.
ಎರಡು ವರ್ಷಗಳ ಹಿಂದೆ ಸುವರ್ಣ ಚಾನಲ್ ಹಾಗೂ ಕನ್ನಡಪ್ರಭ ಪತ್ರಿಕೆಗಳು ನಡೆಸಿದ ಕರ್ನಾಟಕದ ಏಳು ಅದ್ಭುತಗಳ ಅಭಿಯಾನದಲ್ಲಿ ಹಿರೇಬೆಣಕಲ್ ಮೊರೆರ ಬೆಟ್ಟ ಮೊದಲ ಸ್ಥಾನ ಪಡೆದಿತ್ತು.
ಆಗಿನ ಮುಖ್ಯಮಂತ್ರಿಗಳಾಗಿದ್ದ ಬಸವರಾಜ ಬೊಮ್ಮಾಯಿಯವರು ಬೆಂಗಳೂರಿನಲ್ಲಿ ಏಳು ಅಧ್ಬುತಗಳ ಕುರಿತು ಘೋಷಣೆ ಮಾಡಿದ್ದರು.
ಖ್ಯಾತ ನಟ ರಮೇಶ ಅರವಿಂದ, ನಿರ್ದೇಶಕ ಎಸ್.ವಿ.ರಾಜೇಂದ್ರಸಿಂಗ್ ಬಾಬು, ಸುಂದರರಾಜ್ ಇತರರು ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಳೆದ ಹತ್ತಾರು ವರ್ಷಗಳಿಂದ ಈ ಸ್ಥಳವನ್ನು ಪ್ರಚಾರ ಮಾಡಿ ಮುನ್ನೆಲೆಗೆ ತಂದ ಗಂಗಾವತಿ ಚಾರಣ ಬಳಗ ಇದರ ಮೂಲಭೂತ ಅಭಿವೃದ್ಧಿಯಾಗಿ ಆಗ್ರಹ ಮಾಡುತ್ತಾ ಬಂದಿದೆ.
ಇಲ್ಲಿಯವರೆಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ ಆಡಳಿತಾಧಿಕಾರಿಗಳು, ಪೋಲಿಸ್ ವರಿಷ್ಠಾಧಿಕಾರಿಗಳನ್ನು ಹತ್ತಾರು ಬಾರಿ ಮೊರೆರ ಬೆಟ್ಟಕ್ಕೆ ಕರೆದುಕೊಂಡು ಹೋಗಿ ಅಭಿವೃದ್ಧಿಗೆ ಮನವಿ ಮಾಡಿದೆ.
ಈಗಲಾದರೂ ಸರಕಾರ ಮೊರೆರ ಬೆಟ್ಟ ಅಭಿವೃದ್ಧಿಗೆ, ಮೂಲಭೂತ ಸೌಕರ್ಯಗಳಿಗೆ ಹತ್ತು ಕೋಟಿ ರೂಪಾಯಿಗಳನ್ನು ಮಂಜೂರು ಮಾಡಬೇಕೆಂದು ಆಗ್ರಹಪಡಿಸಿದೆ.
ಗಂಗಾವತಿ ಚಾರಣ ಬಳಗದ ಪ್ರಮುಖರಾದ ಡಾ|| ಶಿವಕುಮಾರ್ ಮಾಲಿಪಾಟೀಲ್, ಮಂಜುನಾಥ ಗುಡ್ಲಾನೂರ್, ಮೈಲಾರಪ್ಪ ಬೂದಿಹಾಳ, ಪ್ರಹ್ಲಾದ್ ಕುಲಕರ್ಣಿ, ರಾಮನಾಥ ಭಂಡಾರಕರ್ ಹಾಗೂ ಬೆಣಕಲ್ ಗ್ರಾಮದ ವಿರೇಶ ಅಂಗಡಿ, ಬಸನಗೌಡ ಹೊಸಳ್ಳಿ, ಬೆಂಗಳೂರಿನಲ್ಲಿ ನಡೆದ ಪ್ರದರ್ಶನಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.